ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಡಿ.ಕೆ.ಶಿವಕುಮಾರ್ ಗೆ ಕೌಂಟರ್ ಆಗಿ ಸಿಎಂ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೊಸ ನಾಯಕತ್ವದ ದಾಳ ಉರುಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಹಾಡಿ ಹೊಗಳಿದ್ದಾರೆ. ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಟೆಂಪಲ್ ರನ್, ವಿಶೇಷ ಪೂಜೆಗಳ ಮೊರೆ ಹೋಗಿರುವ ನಡುವೆಯೇ ಇತ್ತ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಕುರಿತು ಅಪಾರ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಮೂಲಕ ಪರೋಕ್ಷವಾಗಿ ಮುಂದಿನ ಉತ್ತರಾಧಿಕಾರಿ ಹೆಸರು ಮುನ್ನೆಲೆಗೆ ತಂದಿದ್ದಾರೆ ಎನ್ನಲಾಗುತ್ತಿದೆ.
ನಮ್ಮ ತಂದೆಯವರು ರಾಜಕೀಯ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ, ಸಿದ್ಧಾಂತ ಇರುವ ನಾಯಕರು ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಿಕೊಳ್ಳುವ ನಾಯಕರು ಬೇಕು. ಸಚಿವ ಸತೀಶ್ ಜಾರಕಿಹೊಳಿ ಆ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಹೊಂದಿದ್ದಾರೆ. ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಮಾದರಿಯಾಗಿ ಅವರು ಮುನ್ನಡೆಯುತ್ತಾರೆ ಎಂಬ ನಂಬಿಕೆ ಇದೆ. ಪಕ್ಷ ಬದ್ಧತೆ ಇರುವಂತ ನಾಯಕರು ಸತೀಶ್ ಜಾರಕಿಹೊಳಿ. ಹಾಗಾಗಿ ಅವರು ನಮ್ಮನ್ನೆಲ್ಲ ಮುನ್ನಡೆಸುತ್ತಾರೆಂಬ ವಿಸ್ವಾಸವಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಹಿಂದ ನಾಯಕತ್ವದ ದಾಳ ಉರುಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ತರುವ ಮೂಲಕ ಅಹಿಂದಸಮುದಾಯವನ್ನು ಒಗ್ಗೂಡಿಸುವ ಯತ್ನವನ್ನು ಯತೀಂದ್ರ ಮಾಡುತ್ತಿದ್ದಾರೆ ಎನ್ನಲಾಗುತಿದೆ.