ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಮಹಿಳೆಯೊಬ್ಬರ ಅದ್ಭುತ ಚಾಲನಾ ಕೌಶಲವನ್ನು ಜಗತ್ತಿಗೆ ತೋರಿಸಿದೆ. ಅಸಾಧ್ಯವೆನಿಸುವಷ್ಟು ಇಕ್ಕಟ್ಟಾದ ರಸ್ತೆಯ ಬದಿಯ ಪಾರ್ಕಿಂಗ್ ಸ್ಥಳದಿಂದ ಆಕೆ ತನ್ನ ಕಾರನ್ನು ಯಾವುದೇ ತೊಂದರೆಯಿಲ್ಲದೆ ಹೊರತೆಗೆದ ರೀತಿ ನೆಟ್ಟಿಗರನ್ನು ಬೆರಗಾಗಿಸಿದೆ.
ಎರಡು ವಾಹನಗಳ ನಡುವೆ ಅಂಟಿಕೊಂಡಂತಿದ್ದ ತನ್ನ ಕಾರಿನೊಳಗೆ ಆ ಮಹಿಳೆ ಸಲೀಸಾಗಿ ಕುಳಿತುಕೊಳ್ಳುವುದು ವಿಡಿಯೋದಲ್ಲಿ ಕಾಣಿಸುತ್ತದೆ. ನೋಡಿದವರಿಗೆ ಇದು ಪಾರ್ಕಿಂಗ್‌ನ ದುಃಸ್ವಪ್ನ ಎಂದು ಅನ್ನಿಸಿದರೂ, ಆಕೆ ಅದನ್ನು ನಿಖರ ಚಾಲನೆಯ ಪಾಠದಂತೆ ಪರಿವರ್ತಿಸಿದರು.
ತುಂಬಾ ಎಚ್ಚರಿಕೆಯಿಂದ, ಸಣ್ಣಗೆ ಎಡ ಮತ್ತು ಬಲಕ್ಕೆ ತಿರುಗಿಸುತ್ತಾ, ಆಕೆ ತನ್ನ ವಾಹನವನ್ನು ನಿಧಾನವಾಗಿ ಮುಂದಕ್ಕೂ ಹಿಂದಕ್ಕೂ ಚಲಾಯಿಸಿದರು. ಕೇವಲ ಕೆಲವೇ ನಿಮಿಷಗಳಲ್ಲಿ ಯಾವುದೇ ಸಹಾಯ ಅಥವಾ ಹಾನಿಯಿಲ್ಲದೆ ಕಾರನ್ನು ಹೊರತೆಗೆದರು. ಈ ಕೌಶಲದಿಂದಾಗಿ ಆಕೆಗೆ ಆನ್‌ಲೈನ್‌ನಲ್ಲಿ “ಅತ್ಯುತ್ತಮ ಚಾಲಕಿ” ಎಂಬ ಬಿರುದು ಲಭಿಸಿದೆ.
ವಿಡಿಯೋವನ್ನು ಮೊದಲು ಹಂಚಿಕೊಂಡವರು, “ಈ ಮಹಿಳೆ ಅಸಾಧ್ಯವೆನಿಸುವಷ್ಟು ಇಕ್ಕಟ್ಟಾದ ಪಾರ್ಕಿಂಗ್ ಸ್ಥಳದಿಂದ ಯಶಸ್ವಿಯಾಗಿ ಕಾರು ಹೊರತೆಗೆಯುವುದನ್ನು ನಾನು ಕೆಲಸದಲ್ಲಿದ್ದಾಗ ನೋಡಿದೆ” ಎಂದು ಬರೆದುಕೊಂಡಿದ್ದಾರೆ. ಈ ದೃಶ್ಯ ಎಲ್ಲಿ ಸೆರೆಯಾಗಿದೆ ಎಂಬುದು ತಿಳಿದಿಲ್ಲ.
ಈ ವಿಡಿಯೋ ನಂತರ ಪಬಿಟಿ ಎಂಬ ಜನಪ್ರಿಯ ಮಾಧ್ಯಮ ಪುಟದಲ್ಲಿ “ಇದು ನಿಜಕ್ಕೂ ಅದ್ಭುತ” ಎಂಬ ಶೀರ್ಷಿಕೆಯೊಂದಿಗೆ ಮರು ಪೋಸ್ಟ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯಿತು. ಕೇವಲ 24 ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.
ಅಂತರ್ಜಾಲದಲ್ಲಿ ಆಕೆಯ ಚಾಲನಾ ಕೌಶಲಕ್ಕೆ ಎಲ್ಲರೂ ಅಭಿಮಾನಿಗಳಾಗಿದ್ದಾರೆ ಮತ್ತು ಕಾಮೆಂಟ್ ವಿಭಾಗವು ಹೊಗಳಿಕೆಯ ಮಾತುಗಳಿಂದ ತುಂಬಿ ತುಳುಕುತ್ತಿದೆ. “ಮಹಿಳೆಯರು ಎಲ್ಲವನ್ನೂ ಮಾಡಬಲ್ಲರು” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ಮಹಿಳೆಯರು ಚಾಲನೆ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಈಕೆ ಒಬ್ಬಂಟಿಯಾಗಿ ಎದುರಿಸುತ್ತಿದ್ದಾರೆ” ಎಂದು ಇನ್ನೊಬ್ಬರು ಸೇರಿಸಿದ್ದಾರೆ. ಅಷ್ಟೇ ಅಲ್ಲದೆ, ಆಟಿಕೆ ಕಾರುಗಳನ್ನು ತಯಾರಿಸುವ ಹಾಟ್ ವೀಲ್ಸ್ ಕೂಡಾ ಕಾಮೆಂಟ್ ಮಾಡಿ, “ಈಕೆ ಬಹಳ ದೂರ ಹೋಗುತ್ತಾಳೆ” ಎಂದು ಶ್ಲಾಘಿಸಿದೆ.
