ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದ ಹೃದಯ ವಿದ್ರಾವಕ ಕಥೆಯೊಂದು ಬೆಳಕಿಗೆ ಬಂದಿದೆ. 15 ವರ್ಷಗಳ ಹಿಂದೆ ಕೇವಲ 16 ವರ್ಷದ ಬಾಲಕಿಯಾಗಿದ್ದ ಯುವತಿಯನ್ನು ಆಕೆಯ ಸ್ವಂತ ಸೋದರಮಾವ ಲೈಂಗಿಕ ದಂಧೆಗೆ ಮಾರಾಟ ಮಾಡಿದ್ದ. ಅಂದಿನಿಂದ ಆಕೆಯ ಜೀವನವು ನೋವು, ಬದುಕುಳಿಯುವಿಕೆ ಮತ್ತು ಮನೆಯ ನೆನಪಿನಲ್ಲೇ ಕೊರಗುತ್ತಾ ಸಾಗಿತ್ತು. ದಶಕದ ನಂತರ ಆಕೆಗೆ ತನ್ನ ಕುಟುಂಬವನ್ನು ಭೇಟಿಯಾಗುವ ಅವಕಾಶ ಲಭಿಸಿತಾದರೂ, ಆ ಮರುಮಿಲನವು ಆಕೆ ಊಹಿಸಿದಂತಿರಲಿಲ್ಲ.
ವಿಷಯ ಸೃಷ್ಟಿಕರ್ತ ಅನೀಶ್ ಭಗತ್ ಅವರು ಹಂಚಿಕೊಂಡ ವಿಡಿಯೊ ಈ ಕರುಣಾಜನಕ ಕಥೆಯನ್ನು ಜಗತ್ತಿಗೆ ಪರಿಚಯಿಸಿತು. ಅವರು ಆ ಯುವತಿಯನ್ನು ಆಕೆಯ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಸಹಾಯ ಮಾಡಲು ಮುಂದಾದರು. 6.7 ಮಿಲಿಯನ್ ವೀಕ್ಷಣೆಗಳನ್ನು ಪಡೆದ ಈ ವಿಡಿಯೊದಲ್ಲಿ, 15 ವರ್ಷಗಳ ಪ್ರತ್ಯೇಕತೆಯ ನಂತರ ಆಕೆ ತನ್ನ ಹಳ್ಳಿಗೆ ಮರಳಲು ಸಿದ್ಧತೆ ನಡೆಸುತ್ತಿರುವ ದೃಶ್ಯಗಳಿವೆ. ಹೊರಡುವ ಮುನ್ನ, ಆಕೆಯ ಸಹೋದ್ಯೋಗಿಗಳು ಆಕೆಗೆ ತನ್ನ ಕುಟುಂಬಕ್ಕೆ ತೆಗೆದುಕೊಂಡು ಹೋಗಲು ಸಣ್ಣ ಉಡುಗೊರೆಗಳನ್ನು ನೀಡುತ್ತಾರೆ.
ತನ್ನ ತಾಯಿಗಾಗಿ ರೇಷ್ಮೆ ಸೀರೆಯನ್ನೂ, ಅಣ್ಣನಿಗಾಗಿ ಕೈಗಡಿಯಾರವನ್ನೂ ಪ್ರೀತಿಯಿಂದ ಆರಿಸುತ್ತಾಳೆ. ಆದರೆ ಆಕೆ ಮನೆಗೆ ಕಾಲಿಟ್ಟಾಗ ಎದುರಾಗಿದ್ದು ಬೆಚ್ಚಗಿನ ಸ್ವಾಗತವಲ್ಲ, ಬದಲಿಗೆ ತಿರಸ್ಕಾರ ! ಆಕೆಯ ಕುಟುಂಬ ಆಕೆಯನ್ನು ಗುರುತಿಸಲು ನಿರಾಕರಿಸಿತು, “ಇತರರು ಏನು ಹೇಳುತ್ತಾರೋ ಎಂಬ ಭಯದಿಂದ ಆಕೆಯ ಕುಟುಂಬ ಆಕೆಯ ನೋವನ್ನು ಒಪ್ಪಿಕೊಳ್ಳುವ ಬದಲು ಆಕೆಯನ್ನು ದೂರವಿಡಲು ನಿರ್ಧರಿಸಿತು” ಎಂದು ವಿಡಿಯೊದ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ನಾನು ಈ ಜೀವನವನ್ನು ಆಯ್ಕೆ ಮಾಡಲಿಲ್ಲ” ಎಂದು ಆಕೆ ತನ್ನ ನೋವನ್ನು ತೋಡಿಕೊಳ್ಳುತ್ತಾಳೆ. “ಆದರೆ ಅವರು ನನ್ನನ್ನು ಹಾಗೆ ನೋಡಿದರು.” ಈ ವಿಡಿಯೊ ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕರು ಆಕೆಯ ದುರಂತ ಕಥೆಗೆ ಕಂಬನಿ ಮಿಡಿದಿದ್ದಾರೆ, ಮತ್ತೆ ಕೆಲವರು ಇಂತಹ ಪರಿಸ್ಥಿತಿಯಲ್ಲಿ ಸಿಲುಕಿರುವ ಮಹಿಳೆಯರ ಬಗ್ಗೆ ಸಮಾಜದ ಮನೋಭಾವ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ.
ಒಬ್ಬ ಬಳಕೆದಾರರು “ಆಕೆಯ ಸೋದರಮಾವನನ್ನು ಸಮಾಜ ಸ್ವೀಕರಿಸುತ್ತದೆಯೇ ? ಆದರೆ ಆಕೆಯನ್ನು ಏಕೆ ತಿರಸ್ಕರಿಸುತ್ತಾರೆ ?” ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾ, “ಇದು ಮೊದಲನೆಯದಲ್ಲ, ಕೊನೆಯದೂ ಅಲ್ಲ. ಅವಳನ್ನು ನಿರಾಸೆಗೊಳಿಸಿದ್ದು ಆಕೆಯ ಸ್ವಂತ ಕುಟುಂಬ. ಅವರು ಆಕೆಗೆ ಬೆಂಬಲ ನೀಡದಿದ್ದಕ್ಕಾಗಿ ಕ್ಷಮೆ ಕೇಳಬೇಕು” ಎಂದು ಬರೆದಿದ್ದಾರೆ.