ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಪರೀಕ್ಷಾ ಕೇಂದ್ರದ ಗೇಟ್ ಮುಚ್ಚಿದ ನಂತರ ವಿದ್ಯಾರ್ಥಿನಿಯೊಬ್ಬಳು ಒಳಗೆ ಪ್ರವೇಶಿಸಲು ಗೇಟ್ ಕೆಳಗೆ ನುಸುಳುವ ದೃಶ್ಯ ಇದಾಗಿದೆ. ಸಮಯ ಪ್ರಜ್ಞೆ ಮತ್ತು ಪರೀಕ್ಷೆಯನ್ನು ತಪ್ಪಿಸಿಕೊಳ್ಳದಿರಲು ಕೆಲವರು ಯಾವ ರೀತಿ ಪ್ರಯತ್ನ ಪಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ, ವಿದ್ಯಾರ್ಥಿನಿ ಮುಚ್ಚಿದ ಗೇಟ್‌ನ ಕೆಳಗೆ ನುಸುಳುತ್ತಿರುವುದು ಮತ್ತು ಕೆಲವರು ಆಕೆಗೆ ಒಳಗೆ ಹೋಗಲು ಸಹಾಯ ಮಾಡುತ್ತಿರುವುದು ಕಂಡುಬರುತ್ತದೆ. ಕಿರಿದಾದ ಜಾಗದಲ್ಲಿ ಆಕೆಯ ಚಲನವಲನ ಕಂಡು ವೀಕ್ಷಕರು ನಗುವಿನ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾವು ಗೇಟ್ ಕೆಳಗೆ ಚಲಿಸುವಂತೆ ಆಕೆ ನುಸುಳುತ್ತಿದ್ದಾಗ ಕೆಲವರು ಆಕೆಯನ್ನು ಪ್ರೋತ್ಸಾಹಿಸುತ್ತಿರುವುದು ಕೇಳಿಸುತ್ತದೆ.
ವರದಿ ಪ್ರಕಾರ, ಈ ಘಟನೆ ಬಿಹಾರದ ನವಾಡ ಬಜಾರ್‌ನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ವಿದ್ಯಾರ್ಥಿಗಳ ಗುಂಪು ತಡವಾಗಿ ಬಂದಿದ್ದರಿಂದ ಅವರನ್ನು ಒಳಗೆ ಬಿಡಲು ನಿರಾಕರಿಸಲಾಗಿದ್ದು, ಪರೀಕ್ಷಾ ಅಧಿಕಾರಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು.
ಈ ವಿಡಿಯೋ ಆನ್‌ಲೈನ್‌ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು, “ನೀವು ತಡವಾಗಿದ್ದೀರಿ. ನಿಯಮಗಳು ನಿಯಮಗಳಾಗಿವೆ” ಎಂದು ಸಮಯ ಪ್ರಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಬೆಂಬಲಿಸಿದರೆ “ಗೇಟ್ ಕೆಳಗೆ ನುಸುಳುವುದು ಸ್ವಲ್ಪ ಅತಿಯಾಯಿತು” ಎಂದು ಇನ್ನೊಬ್ಬರು ಹೇಳಿದ್ದಾರೆ.