ಬಂದಾ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಶನಿವಾರ ತನ್ನ ಪತಿಯೊಂದಿಗಿನ ಜಗಳದಿಂದಾಗಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳನ್ನು ದೇಹಕ್ಕೆ ಕಟ್ಟಿಹಾಕಿ ಕೆನ್ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಿಳೆಯ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಸೌರಾ ಗ್ರಾಮದ ಅಖಿಲೇಶ್ ಆರ್ಖ್ ಅವರ ಪತ್ನಿ ರೀನಾ(30) ಮತ್ತು ಅವರ ಮೂವರು ಮಕ್ಕಳಾದ ಹಿಮಾಂಶು(9), ಅನ್ಶಿ(5) ಮತ್ತು ಪ್ರಿನ್ಸ್ (3) ಅವರೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಶನಿವಾರ ಬೆಳಿಗ್ಗೆ ಪೊಲೀಸರಿಗೆ ಸಿಕ್ಕಿದೆ.
ಪೊಲೀಸರು ಮತ್ತು ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದಾಗ, ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಕೆನ್ ಕಾಲುವೆಯ ದಡದಲ್ಲಿ ರೀನಾಳ ಬಳೆಗಳು ಮತ್ತು ಮಕ್ಕಳ ಕೆಲವು ಬಟ್ಟೆಗಳು ಕಂಡುಬಂದಿವೆ. ಶವಗಳನ್ನು ಹೊರತೆಗೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ತಿಳಿಸಿದ್ದಾರೆ.