ತಡರಾತ್ರಿಯ ಊಬರ್ ಪ್ರಯಾಣದಲ್ಲಿ ಚಾಲಕರೊಬ್ಬರು ತೋರಿದ ಸಣ್ಣ ಮಾನವೀಯತೆಯ ಕಥೆಯೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ.
ರೆಡ್ಡಿಟ್‌ನಲ್ಲಿ @Ok_Box3456 ಎಂಬ ಬಳಕೆದಾರರ ಹೆಸರುಗಳಲ್ಲಿ ಮಹಿಳೆಯೊಬ್ಬರು, “ದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು ಮಾಡಲಿ” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಒತ್ತಡದಿಂದ ಕೂಡಬಹುದಾಗಿದ್ದ ಸನ್ನಿವೇಶವು ಹೇಗೆ ಆಳವಾದ ಭರವಸೆಯ ಅನುಭವವಾಗಿ ಬದಲಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ. “ನಿನ್ನೆ ಸುಮಾರು 10:30ಕ್ಕೆ ನಾನು ಸಹೋದ್ಯೋಗಿಗಳೊಂದಿಗೆ ಪೋಸ್ಟ್ ಆಫೀಸ್ ಕೆಲಸ ಮುಗಿಸಿ ಮನೆಗೆ ಹಿಂದಿರುಗಲು ಊಬರ್ ಬುಕ್ ಮಾಡಿದ್ದೆ. ಊಬರ್ ಒಂದು ನಿಮಿಷದಲ್ಲಿ ಬಂತು, ಒಟಿಪಿ ಹಂಚಿಕೊಂಡೆ ಮತ್ತು ಪ್ರಯಾಣ ಪ್ರಾರಂಭವಾಯಿತು” ಎಂದು ಅವರು ಬರೆದಿದ್ದಾರೆ.
ಆದರೆ, ಸುಮಾರು 100 ಮೀಟರ್ ಪ್ರಯಾಣಿಸಿದ ನಂತರ, ಅವರು ಆತುರದಲ್ಲಿ ಮತ್ತು ಜಿಟಿಜಿಟಿ ಮಳೆಯಲ್ಲಿ ತಮ್ಮ ಮನೆ ವಿಳಾಸದ ಬದಲಿಗೆ ಆಫೀಸ್ ವಿಳಾಸವನ್ನು ತಪ್ಪಾಗಿ ನಮೂದಿಸಿರುವುದು ಗೊತ್ತಾಯಿತು. ತಕ್ಷಣವೇ ಚಾಲಕನನ್ನು ನಿಲ್ಲಿಸಿ ಪರಿಸ್ಥಿತಿಯನ್ನು ವಿವರಿಸಿ, ಡ್ರಾಪ್-ಆಫ್ ಪಾಯಿಂಟ್ ಬದಲಾಯಿಸಲು ಕೇಳಿಕೊಂಡರು. ಆದರೆ ಚಾಲಕ ತನ್ನ ಹೊಸ ಗಮ್ಯಸ್ಥಾನವು ತಾನು ಹೋಗಬೇಕಾದ ದಿಕ್ಕಿಗೆ ವಿರುದ್ಧವಾಗಿದೆ ಎಂದು ವಿವರಿಸಿ ನಿರಾಕರಿಸಿದರು.
ಚಾಲಕನ ಕಾಳಜಿ ಹೃದಯದಲ್ಲಿ ಅಚ್ಚಳಿಯದೆ ಉಳಿಯಿತು
ನಿರಾಶೆಗೊಂಡು ಸ್ವಲ್ಪ ಗಾಬರಿಗೊಂಡ ಆಕೆ, ರೈಡ್ ರದ್ದುಪಡಿಸಿ ಇನ್ನೊಂದು ಕ್ಯಾಬ್ ಬುಕ್ ಮಾಡುವುದಾಗಿ ಚಾಲಕನಿಗೆ ತಿಳಿಸಿದರು. ಆದರೆ ಮಸುಕಾದ ಬೆಳಕಿದ್ದ ರಸ್ತೆಯಲ್ಲಿ ಒಬ್ಬಂಟಿಯಾಗಿ ನಿಲ್ಲುವುದು ಭಯಾನಕ ಮತ್ತು ಅಸುರಕ್ಷಿತವೆನಿಸಿತು. ಆಗ ಚಾಲಕ ಪ್ರತಿಕ್ರಿಯಿಸಿ “ಮೇಡಂ, ನೀವು ಇನ್ನೊಂದು ಕ್ಯಾಬ್ ಬುಕ್ ಮಾಡಿಕೊಳ್ಳಿ, ಅದು ಬರುವವರೆಗೂ ಕಾರಿನಲ್ಲೇ ಕುಳಿತುಕೊಳ್ಳಿ. ಇಂತಹ ರಾತ್ರಿಯಲ್ಲಿ ನೀವು ರಸ್ತೆಯಲ್ಲಿ ಒಬ್ಬಂಟಿಯಾಗಿ ಎಲ್ಲಿ ನಿಂತಿರುತ್ತೀರಿ? ಇದು ಸರಿಯಲ್ಲ,” ಎಂದು ಅವರು ಹೇಳಿದ್ದಾರೆ.
ಚಾಲಕನ ಈ ಮಾತುಗಳು ತಮ್ಮ “ಹೃದಯ ತುಂಬಿ ಬಂತು ಮತ್ತು ಸುರಕ್ಷತೆಯ ಭಾವನೆ ಮೂಡಿಸಿತು” ಎಂದು ಆಕೆ ಬರೆದಿದ್ದಾರೆ. ಚಾಲಕ, ತಾನು ಆರೋಗ್ಯವಾಗಿಲ್ಲ, ಊಟ ಮಾಡಿಲ್ಲ ಮತ್ತು ತನ್ನ ಮನೆಗೆ ಹೋಗುತ್ತಿದ್ದೆ, ಅದು ಆಕೆ ನಮೂದಿಸಿದ ಆರಂಭಿಕ ಸ್ಥಳದ ಸಮೀಪದಲ್ಲಿದೆ ಎಂದು ವಿವರಿಸಿದ್ದರು.
ಅವರ ಎರಡನೇ ಕ್ಯಾಬ್ ಬರುವವರೆಗೆ ಚಾಲಕ ಕಾಯ್ದರು, ಅವರು ಹೊಸ ವಾಹನವನ್ನು ಸುರಕ್ಷಿತವಾಗಿ ಹತ್ತಿದ್ದಾರೆ ಎಂದು ಖಚಿತಪಡಿಸಿಕೊಂಡು ನಂತರ ಹೊರಟು ಹೋಗಿದ್ದಾರೆ.
ಚಾಲಕನ ನೆರವಿಗೆ ಇಂಟರ್ನೆಟ್ ಬಳಕೆದಾರರಿಂದ ಮೆಚ್ಚುಗೆ
ಈ ಪೋಸ್ಟ್ ಇತರ ರೆಡ್ಡಿಟ್ ಬಳಕೆದಾರರಿಂದ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ಒಬ್ಬರು, “ನಾನು ಒಮ್ಮೆ ನನ್ನ ಅಜ್ಜಿಗೆ ಕ್ಯಾಬ್ ಬುಕ್ ಮಾಡಿದ್ದೆ, ಆದರೆ ಸ್ವಲ್ಪ ಸಮಯದ ನಂತರ ಆಕೆ ವಾಂತಿ ಮಾಡಿಕೊಂಡಳು. ಕ್ಯಾಬ್ ಡ್ರೈವರ್ ಅವರನ್ನು ಮನೆಗೆ ಮರಳಿ ಬಿಟ್ಟರು. ಶುಲ್ಕ ಪಡೆಯಲಿಲ್ಲ… ಬದಲಾಗಿ ಒಂದು ಕಪ್ ಚಹಾ ಕುಡಿದು ಹೊರಟು ಹೋದರು,” ಎಂದು ಬರೆದಿದ್ದಾರೆ. ಇನ್ನೊಬ್ಬರು, “ಖಂಡಿತ, ದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು ಮಾಡಲಿ” ಎಂದು ಹೇಳಿದ್ದಾರೆ.
ಒಬ್ಬ ಬಳಕೆದಾರರು ಅವರನ್ನು “ಜವಾಬ್ದಾರಿಯುತ ನಾಗರಿಕ” ಎಂದು ವಿವರಿಸಿದರೆ, ಇನ್ನೊಬ್ಬರು, “ದೆಹಲಿಯಲ್ಲಿ ಒಬ್ಬಂಟಿಯಾಗಿ ವಾಸಿಸುವ ಮಹಿಳೆಯಾಗಿ, ನಾನು ಊಬರ್ ಡ್ರೈವರ್‌ಗಳೊಂದಿಗೆ ಹೆಚ್ಚಾಗಿ ಉತ್ತಮ ಅನುಭವಗಳನ್ನು ಹೊಂದಿದ್ದೇನೆ ಎಂದು ಹೇಳಲೇಬೇಕು” ಎಂದು ಹಂಚಿಕೊಂಡಿದ್ದಾರೆ.
ಒಬ್ಬ ಕಾಮೆಂಟರ್, “ಇದು ತುಂಬಾ ಹೃದಯಸ್ಪರ್ಶಿ ಓದು… ದೊಡ್ಡ ವಿಷಯಗಳಲ್ಲ, ಮೂಲಭೂತ ಮಾನವೀಯತೆಯ ಸಣ್ಣ ಕ್ಷಣಗಳು ನಿಮ್ಮೊಂದಿಗೆ ಉಳಿಯುತ್ತವೆ,” ಎಂದು ಬರೆದಿದ್ದಾರೆ. ಇನ್ನೊಬ್ಬರು, “ನಮ್ಮ ದೇಶಕ್ಕೆ ಇಂತಹ ಹೆಚ್ಚಿನ ಜನರು ಬೇಕು” ಎಂದು ಸೇರಿಸಿದ್ದಾರೆ.
https://www.reddit.com/r/delhi/comments/1m0dlif/god_bless_that_uber_guy/?utm_source=share&utm_medium=web3x&utm_name=web3xcss&utm_term=1&utm_content=share_button