ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಚಾಕುವಿನಿಂದ ಇರಿದು ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೈಮರಾ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕೀರ್ತಿ (26) ಕೊಲೆಯಾದ ಮಹಿಳೆ. ಅವಿನಾಶ್ (32) ಪತ್ನಿಯನ್ನೇ ಕೊಂದ ಪತಿ. ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಕ್ಷುಲ್ಲಕ ಕಾರಣಕ್ಕೆ ಇಂದೂ ಕೂಡ ಇಬ್ಬರ ನಡುವೆ ಜಗಳವಾಗಿದೆ. ಕೋಪದ ಬರದಲ್ಲಿ ಅವಿನಾಶ್ ಚಾಕುವಿನಿಂದ ಪತ್ನಿಯನ್ನು 10 ಬಾರಿ ಮನಬಂದಂತೆ ಇರಿದು ಕೊಂದೇ ಬಿಟ್ಟಿದ್ದಾನೆ.
ದಂಪತಿಗೆ ಎರಡುವರೆ ವರ್ಷದ ಮಗಳು ಇದ್ದಾಳೆ. ಅವಿನಾಶ್ ಪತ್ನಿಗೆ ಪದೇ ಪದೇ ಡಿವೋರ್ಸ್ ನೀಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಕೀರ್ತಿಯನ್ನು ಮನೆಯವರಿಗೆ ಗೊತ್ತಾಗದಂತೆ ಅಬಾರ್ಷನ್ ಕೂಡ ಮಾಡಿಸಿದ್ದನಂತೆ ದುರುಳ ಪತಿ. ಬಟ್ಟೆ ತೆಗೆದುಕೊಂಡು ಬರಲೆಂದು ಹೋದ ಪತ್ನಿ ಕೀರ್ತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ರಕ್ತದ ಮಡುವಲ್ಲಿ ಬಿದ್ದಿದ್ದ ಕೀರ್ತಿಯನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಾಳೆ. ಪತ್ನಿ ಹತ್ಯೆ ಬಳಿಕ ಆರೋಪಿ ಪತಿ ಅವಿನಾಶ್ ನಾಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.