ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆ ಎಂದರೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಅಡಿಯಲ್ಲಿ ಕೆಲಸ ಮಾಡುವ ಒಬ್ಬ ಉದ್ಯೋಗಿ. ಇವರು 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡುವುದು, ಆರೋಗ್ಯ ತಪಾಸಣೆ, ರೋಗನಿರೋಧಕ ಲಸಿಕೆಗಳು, ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಶಿಕ್ಷಣ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಸಮುದಾಯದ ಸಮೀಕ್ಷೆಯನ್ನು ಕೈಗೊಂಡು ಅಗತ್ಯವಾಗಿರುವಂಥವರ ವಿವರ ಸಂಗ್ರಹಿಸುವುದು. ಆರು ವರ್ಷದ ಕೆಳಗಿನ ಮಕ್ಕಳ ಸಂಖ್ಯೆ ಗರ್ಭಿಣಿ ಮತ್ತು ಹಾಲೂಣಿಸುತ್ತಿರುವ ತಾಯಂದಿರು, ಇವುಗಳನ್ನೂ ಸಂಗ್ರಹಿಸಬೇಕು. ಕುಟುಂಬಗಳ ಸಂಖ್ಯೆ ಕುಟುಂಬದಲ್ಲಿ ಸದಸ್ಯರ ಸಂಖ್ಯೆ, ಕುಟುಂಬದ ಆದಾಯ ಇವುಗಳನ್ನು ಸಂಗ್ರಹಿಸಬೇಕು. ಮುಖ್ಯ ಅಂಕಿ-ಅಂಶಗಳಾದ ಜನನ-ಮರಣಗಳ ದಾಖಲೆಯನ್ನೂ ಇಡಬೇಕು.
3 ಮತ್ತು 6 ವರ್ಷಗಳ ನಡುವಣ ಮಕ್ಕಳ ಶಾಲಾಪೂರ್ವ ಶಿಕ್ಷಣವನ್ನು ಕೈಗೊಳ್ಳಬೇಕು.
0-6 ವರ್ಷಗಳ ನಡುವಿನ ಮಕ್ಕಳ ಮತ್ತು ಗರ್ಭಿಣಿ ಹಾಗೂ ಹಾಲೂಣಿಸುತ್ತಿರುವ ತಾಯಂದಿರಿಗೆ ಅಧಿಕ ಪೋಷಕಾಂಶ ಇರುವ ಅಹಾರವನ್ನು ಒದಗಿಸುವುದು.
ಪ್ರಾಥಮಿಕ ಆರೋಗ್ಯ ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು.
ರೋಗ ನಿರೋಧಕ ಚುಚ್ಚುಮದ್ದು ಮತ್ತು ಆರೋಗ್ಯ ತಪಾಸಣೆ ಮಾಡುವಲ್ಲಿ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡುವುದು.
ಪ್ರಬಲವಾಗಿ ನ್ಯೂನಪೋಷಣೆಗೊಳಗಾದ, ಪೋಷಕಾಂಶದ ಅಗತ್ಯವುಳ್ಳ, ಅನಾರೋಗ್ಯ ಉಂಟಾದ, ಅಪಾಯದಲ್ಲಿರುವ ಮಕ್ಕಳನ್ನು, ಅಂಟುರೋಗ ಇರುವ ರೋಗಿಗಳನ್ನು ತಜ್ಞ ವೈದ್ಯರಲ್ಲಿಗೆ ಕಳುಹಿಸಬೇಕು.
ಅಂಗನವಾಡಿ ಕೇಂದ್ರಕ್ಕೆ ಬರುವ ಗರ್ಭಿಣಿ ಮತ್ತು ಹಾಲೂಡಿಸುತ್ತಿರುವ ತಾಯಂದಿರಿಗೆ ಅಂಗನವಾಡಿ ಕಾರ್ಯಕರ್ತರು ಮನೆ ಭೇಟಿ ಮಾಡುವ ವೇಳೆಯಲ್ಲಿ ಮತ್ತು ಶಿಕ್ಷಣ ಕಾರ್ಯಕ್ರಮದ ಕಾಲದಲ್ಲಿ ಆರೋಗ್ಯ ಮತ್ತು ಪೋಷಣೆಗೆ ಸಂಬಂದಿಸಿದ ತಿಳುವಳಿಕೆಯನ್ನು ಕೊಡಬೇಕು.
ಅಂಗನವಾಡಿಗೆ ಬರುವ ತಂದೆ-ತಾಯಿಯರನ್ನು ಕಂಡು ಅವರೊಡನೆ ಸಂಪರ್ಕ ಬೆಳೆಸುವುದು.
ತೂಕದ ಕಾರ್ಡ್ಗಳು, ರಿಜಿಸ್ಟರುಗಳು, ಮಗುವಿನ ಆರೋಗ್ಯ, ಪೋಷಕಾಂಶಕ್ಕೆ ಸಂಬಂಧಿಸಿದ ದಾಖಲೆಗಳು, ಅಂಗನವಾಡಿ ಹಾಜರಿ ದಾಖಲೆಗಳು ಇವುಗಳನ್ನು ಬರೆದಿಟ್ಟು ಜನ ಸಮುದಾಯ ಸೇವೆಯ ಉಪಯೋಗವನ್ನು ಸರಿಯಾಗಿ ಪಡೆಯುತ್ತಿದೆಯೇ ಎಂದು ತಿಳಿಯುವಲ್ಲಿ ಸಹಕರಿಸುವುದು.
ಗ್ರಾಮದ ಇತರ ಸಂಘ-ಸಂಸ್ಥೆಗಳಾದ ಪಂಚಾಯಿತಿ, ಮಹಿಳಾ ಮಂಡಲಿಗಳೊಡನೆ ಸಂಪರ್ಕ, ಶಾಲಾ ಉಪಾಧ್ಯಾಯರೊಡನೆ ಸಂಪರ್ಕ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಅವರ ಸಹಕಾರ ಸಹಭಾಗಿತ್ವವನ್ನು ಕೋರುವುದು.
15-45 ವರ್ಷಗಳ ವಯಸ್ಸಿನ ಹೆಂಗಸರ ಅಕ್ಷರ ಕಲಿಕೆ ಕಾರ್ಯಕ್ರಮವನ್ನು ಏರ್ಪಡಿಸಿ ನಡೆಸುವುದು.

