ಅಗತ್ಯವಿದ್ದರೆ ರಾಷ್ಟ್ರಪತಿಗಳ ಬಳಿ ತೆರಳುತ್ತೇವೆ; ಕುಸ್ತಿಪಟು ಹೋರಾಟ ಬೆಂಬಲಿಸಿ ರಾಕೇಶ್ ಟಿಕಾಯತ್ ಹೇಳಿಕೆ

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಹೋರಾಟ ಬೆಂಬಲಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಅಗತ್ಯವಿದ್ದರೆ ರಾಷ್ಟ್ರಪತಿಗಳ ಬಳಿ ತೆರಳುವುದಾಗಿ ಹೇಳಿದ್ದಾರೆ. ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಇಂದು ಪ್ರತಿಭಟಿಸಿದ ರೈತ ಸಂಘ ನಾಳೆ ಹರಿಯಾಣದಲ್ಲಿ ನಡೆಯಲಿರುವ ಸಭೆಯಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಹರಿಯಾಣದ ರೈತರು ಕುಸ್ತಿಪಟುಗಳಿಗೆ ಬೆಂಬಲವನ್ನು ನೀಡಿದ್ದು ಮುಂದಿನ ಹೋರಾಟದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರವನ್ನು ನಿರ್ಧರಿಸಲಿದ್ದಾರೆ. ತಮ್ಮ ಪದಕಗಳನ್ನು ಗಂಗಾ ನದಿಗೆ ಹಾಕದಂತೆ ಕುಸ್ತಿಪಟುಗಳ ಮನವೊಲಿಸಿದ ಟಿಕಾಯತ್ ಅಗತ್ಯವಿದ್ದರೆ ನಾವು ಭಾರತದ ರಾಷ್ಟ್ರಪತಿಗಳ ಬಳಿಗೆ ಹೋಗುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ, ನೀವು ಚಿಂತಿಸಬೇಕಾಗಿಲ್ಲ ಎಂದು ಅವರು ಇಂದು ಮುಜಾಫರ್‌ನಗರದಲ್ಲಿ ನಡೆದ ಬೃಹತ್ ಸಭೆಯಲ್ಲಿ ತಿಳಿಸಿದರು.

ರೈತರು ಕುಸ್ತಿಪಟುಗಳಿಗೆ ಏಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಕುಟುಂಬವು ದೊಡ್ಡದಾಗಿದ್ದರೆ ಒಳ್ಳೆಯದು” ಎಂದು ಹೇಳಿದರು.

“ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರು ಬಿಹಾರದಲ್ಲಿ ಲಾಲು ಯಾದವ್ ಅವರ ಕುಟುಂಬವನ್ನು ಒಡೆದರು. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದೊಂದಿಗೆ ಅವರು ಏನು ಮಾಡಿದ್ದಾರೆಂದು ನೋಡಿ. ರಾಜಸ್ಥಾನದಲ್ಲಿ ಅದೇ ವಿಷಯ ನಡೆಯುತ್ತಿದೆ” ಎಂದು ಅವರು ಸಭೆಯಲ್ಲಿ ಭಾಗವಹಿಸಿದ್ದ ರೈತರಿಗೆ ಹೇಳಿದರು.

ಸೋಮವಾರ ತಮ್ಮ ಪ್ರತಿಭಟನೆಯ ಮೇಲೆ ದೆಹಲಿ ಪೋಲೀಸರು ದಬ್ಬಾಳಿಕೆ ನಡೆಸಿದ ಒಂದು ದಿನದ ನಂತರ, ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿದಲ್ಲಿ ಮುಳುಗಿಸಲು ನಿರ್ಧರಿಸಿ ಹರಿದ್ವಾರಕ್ಕೆ ತೆರಳಿದ್ದರು. ಆದರೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥರಾದ ರಾಕೇಶ್ ಟಿಕಾಯತ್ ಮಧ್ಯಸ್ಥಿಕೆಯ ನಂತರ ಅವರು ಅಂತಿಮವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರು.

ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನವರಿಯಿಂದ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧದ ಆರೋಪ ಸಾಬೀತಾದರೆ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಪ್ರತಿಪಾದಿಸಿದ್ದಾರೆ. ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ, ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read