ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಠಾಕ್ರೆ ಸಹೋದರರಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಅವರ ಸಂಭವನೀಯ ಮರುಮಿಲನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡುವ ಸಾಧ್ಯತೆ ಇದೆ.
ಇತ್ತೀಚೆಗೆ ನಟ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಸಂದರ್ಶನದಲ್ಲಿ ರಾಜ್ ಠಾಕ್ರೆ, “ನಮ್ಮ ನಡುವಿನ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳು ದೊಡ್ಡ ಕಾರಣಗಳಿಗೆ ಹೋಲಿಸಿದರೆ ಚಿಕ್ಕವು. ಮಹಾರಾಷ್ಟ್ರವು ನಮ್ಮ ವೈಯಕ್ತಿಕ ಸಮಸ್ಯೆಗಳಿಗಿಂತ ದೊಡ್ಡದು. ಮರಾಠಿ ಅಸ್ತಿತ್ವದ ಹೋರಾಟದಲ್ಲಿ ಈ ವಿಷಯಗಳು ಕ್ಷುಲ್ಲಕವಾಗಿವೆ. ಒಟ್ಟಿಗೆ ಬರುವುದು ಅಥವಾ ಒಟ್ಟಿಗೆ ಕೆಲಸ ಮಾಡುವುದು ಕಷ್ಟದ ವಿಷಯವಲ್ಲ – ಇದು ಕೇವಲ ಇಚ್ಛಾಶಕ್ತಿಯ ವಿಷಯ. ಮತ್ತು ಇದು ನನ್ನ ಬಗ್ಗೆ ಮಾತ್ರವಲ್ಲ. ರಾಜಕೀಯ ಪಕ್ಷಗಳಾದ್ಯಂತ ಎಲ್ಲಾ ಮರಾಠಿ ಜನರು ಒಂದಾಗಬೇಕು ಮತ್ತು ಒಂದೇ ವೇದಿಕೆಯನ್ನು ರಚಿಸಬೇಕು” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ ಸಹ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಸಣ್ಣ ಭಿನ್ನಾಭಿಪ್ರಾಯಗಳನ್ನು ಬದಿಗಿಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.
“ಇಬ್ಬರೂ ಒಟ್ಟಿಗೆ ಬಂದರೆ ನಮಗೆ ಸಂತೋಷವಾಗುತ್ತದೆ, ಏಕೆಂದರೆ ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಪಡಿಸಿಕೊಂಡರೆ ಅದು ಒಳ್ಳೆಯದು. ಇದರ ಬಗ್ಗೆ ನಾನು ಏನು ಹೇಳಲಿ?” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮುಂಬರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಠಾಕ್ರೆ ಸಹೋದರರ ಒಗ್ಗೂಡುವಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಮುಂಬೈನ ವಿವಾಹ ಸಮಾರಂಭದಲ್ಲಿ ಠಾಕ್ರೆ ಸಹೋದರರು ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದು, ಡಿಸೆಂಬರ್ 2024 ರಲ್ಲಿ ರಾಜ್ ಠಾಕ್ರೆ, ರಶ್ಮಿ ಠಾಕ್ರೆ ಅವರ ಸೋದರಳಿಯ ಶೌನಕ್ ಪಟಾಂಕರ್ ಅವರ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಠಾಕ್ರೆ ಸಹೋದರರ ಮರುಮಿಲನ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬದಲಾವಣೆಗಳನ್ನು ತರುವ ಸಾಧ್ಯತೆಯಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
#WATCH | Mumbai: Maharashtra CM Devendra Fadnavis says, "If the two come together, we will be happy about it, because if people settle their differences, it is a good thing. What else can I say about it?…" https://t.co/jXt2DOW3dj pic.twitter.com/9jHK9XYdQ6
— ANI (@ANI) April 19, 2025