ಮಾರ್ಚ್ 30 ರ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ನ 11 ನೇ ಪಂದ್ಯದ ಮುನ್ನ ಭಾರತದ ಮಾಜಿ ದಂತಕಥೆ ಮತ್ತು ರಾಜಸ್ಥಾನ ರಾಯಲ್ಸ್ (ಆರ್‌ಆರ್) ಕೋಚ್ ರಾಹುಲ್ ದ್ರಾವಿಡ್ ತಮ್ಮ ಕೆಲಸಕ್ಕೆ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಖಾಮುಖಿಯಾಗಿದ್ದವು.
ಪಂದ್ಯದ ಆರಂಭದ ಮುನ್ನ ದ್ರಾವಿಡ್ ಅವರ ನಡೆಗೆ ಅಭಿಮಾನಿಗಳು ಮನಸೋತರು. ಅವರು ಗಾಲಿಕುರ್ಚಿಯಲ್ಲಿ ಪಿಚ್ ಪರಿಶೀಲನೆ ನಡೆಸುತ್ತಿದ್ದುದು ಕಂಡುಬಂದಿತು. ಇದನ್ನು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಹಾಡಿಹೊಗಳಿದ್ದಾರೆ. ಸಂಜಯ್ ಮಂಜ್ರೇಕರ್ ಮತ್ತು ಅಂಬಟಿ ರಾಯುಡು ಪ್ರಸಾರದಲ್ಲಿ ಮಾತನಾಡುತ್ತಿದ್ದಾಗ ರಾಯುಡು ಈ ಬಗ್ಗೆ ಗಮನಸೆಳೆದರು.
ಐಪಿಎಲ್ 2025 ಸೀಸನ್ ಪ್ರಾರಂಭವಾಗುವ ಹೊತ್ತಿಗೆ ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಪಂದ್ಯದಲ್ಲಿ ಆಡುತ್ತಿದ್ದಾಗ ಕಾಲು ಗಾಯಗೊಂಡಿದ್ದರಿಂದ ಭಾರತದ ಮಾಜಿ ಕೋಚ್ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದ್ರಾವಿಡ್ 22-ಯಾರ್ಡ್ ಪಟ್ಟಿಯನ್ನು ಪರಿಶೀಲಿಸಲು ಗಾಲಿಕುರ್ಚಿಯಲ್ಲಿ ಸಾಗುತ್ತಿದ್ದುದು ಕಂಡುಬಂದಿದೆ. ಇದನ್ನು ನೋಡಿದ ತಜ್ಞರಿಬ್ಬರೂ ಆಶ್ಚರ್ಯಚಕಿತರಾದರು.
ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ 6 ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಿತು. ನಿತೀಶ್ ರಾಣಾ ಅವರ 81 ರನ್ ಗಳ ನೆರವಿನಿಂದ 182 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಆರ್‌ಆರ್ ಗಳಿಸಿತು. ರಾಣಾ ಕೇವಲ 36 ಎಸೆತಗಳಲ್ಲಿ 81 ರನ್ ಗಳಿಸಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.
183 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಆರಂಭದಲ್ಲಿಯೇ ರಚಿನ್ ರವೀಂದ್ರ ಅವರ ವಿಕೆಟ್ ಕಳೆದುಕೊಂಡಿತು. ನಂತರ ನಿಧಾನವಾಗಿ ರನ್ ಗಳಿಸಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ, ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್‌ಗಳಿಂದ ಗೆದ್ದಿತು. ಇದರೊಂದಿಗೆ, ಸಿಎಸ್‌ಕೆ ಇನ್ನೂ ಐಪಿಎಲ್ ಸೀಸನ್‌ನಲ್ಲಿ ತನ್ನ ಮೊದಲ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದೆ.