DC vs MI ಪಂದ್ಯದ ವೇಳೆ ಗದ್ದಲ: ಅಭಿಮಾನಿಗಳ ನಡುವೆ ಮಾರಾಮಾರಿ | Viral Video

ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2025 ಪಂದ್ಯದ ವೇಳೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಪಂದ್ಯದ ವೀಕ್ಷಣೆಗೆ ಬಂದಿದ್ದ ಮಹಿಳಾ ಅಭಿಮಾನಿಯೊಬ್ಬರು ಪುರುಷನೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಗಲಾಟೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬರುವ ಮುನ್ನವೇ ಇತರ ಪ್ರೇಕ್ಷಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಈ ಗದ್ದಲಕ್ಕೆ ಕಾರಣರಾದವರ ವಿರುದ್ಧ ಆಡಳಿತ ಮಂಡಳಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪಂದ್ಯದ ವಿಚಾರಕ್ಕೆ ಬಂದರೆ, ಮುಂಬೈ ಇಂಡಿಯನ್ಸ್ 12 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಈ ಟೂರ್ನಿಯಲ್ಲಿ ತಮ್ಮ ಎರಡನೇ ಗೆಲುವು ದಾಖಲಿಸಿದೆ. ಅಚ್ಚರಿಯೆಂದರೆ, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನ ಮೊದಲ ಸೋಲು ಕಂಡಿತು. ಇದಕ್ಕೂ ಮುನ್ನ ಅವರು ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರು. ಕರುಣ್ ನಾಯರ್ ಅವರ ಸ್ಪೋಟಕ ಬ್ಯಾಟಿಂಗ್ (40 ಎಸೆತಗಳಲ್ಲಿ 89 ರನ್) ಕೂಡ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಮುಂಬೈ ಇಂಡಿಯನ್ಸ್‌ನ ಸ್ಪಿನ್ನರ್ ಕರ್ಣ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಕೇವಲ 36 ರನ್ ನೀಡಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಪಂದ್ಯದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಮುಂಬೈ ಇಂಡಿಯನ್ಸ್ ತನ್ನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.

ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೈದಾನದಲ್ಲಿ ಏಪ್ರಿಲ್ 16 ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮುಂಬೈ ಇಂಡಿಯನ್ಸ್ ಏಪ್ರಿಲ್ 17 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read