ವೋಟ್ ಚೋರಿ ತಡೆಗೆ ಕೈ ಕಾರ್ಯಪಡೆ ರಚನೆ: ಕರ್ನಾಟಕದಲ್ಲಿ ಮೊದಲ ಬಾರಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಪಡೆ ಸಿದ್ಧ: ಸಚಿವ ಬೈರತಿ ಸುರೇಶ್ ಘೋಷಣೆ

ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮತಗಳ್ಳತನ ಅಥವಾ ವೋಟ್ ಚೋರಿ ಪ್ರಕರಣಗಳನ್ನು ಪತ್ತೆ ಮಾಡಲು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆಯನ್ನು ರಚಿಸುವುದಾಗಿ ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾತನಾಡಿದ ಸಚಿವರು, ಮತ ಚೋರಿ ಪತ್ತೆಗೆ ಕೈ ಕಾರ್ಯಪಡೆ ರಚಿಸಲಾಗುವುದು ಎಂದರು. 2023 ರ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿಯೂ ಮತಚೋರಿ ಆಗಿದೆ. ಸುಮಾರು 20 ಸಾವಿರಕ್ಕೂ ಅಧಿಕ ಜನರು ಕ್ಷೇತ್ರದಲ್ಲಿ ವಾಸ ಮಾಡದಿದ್ದರೂ ಬೆಂಗಳೂರು ಹೊರವಲಯದಿಂದ ಚುನಾವಣೆ ದಿನ ಬಂದು ಮತ ಚಲಾಯಿಸಿ ಹೋಗಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಪಾಲಿಕೆ ಮತ್ತು ವಿಧಾಸನಭೆ ಚುನಾವಣೆಯಲ್ಲಿ ಈ ಮತಚೋರಿ ಮರಕಳಿಸದಂತೆ ಎಚ್ಚರಿಕೆ ವಹಿಸಲು ಈಗಿನಿಂದಲೇ ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಹೇಳಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಗಳಿಗೆ ಕಾಂಗ್ರೆಸ್ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಕಾರ್ಯಪಡೆ ಇರಲಿದ್ದು, ಇವುಗಳ ಸದಸ್ಯರು ತಮ್ಮ ವಾರ್ಡ್ ಗಳಿಗೆ ಸಂಬಂಧಿಸಿದಂತೆ ಚುನಾವಣೆ ಆಯೋಗದಿಂದಲೇ ಖಚಿತ ಮತ ಪಟ್ಟಿಯನ್ನು ಪಡೆಯಲಿದ್ದಾರೆ. ಇದರ ಆಧಾರದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಮೂಲ ಮತದಾರರು ಆ ಮನೆಗಳಲ್ಲಿ ವಾಸಿಸುತ್ತಿದ್ದಾರೆಯೇ ಇಲ್ಲವೇ? ಎಂಬುದನ್ನು ಪತ್ತೆ ಮಾಡಲಿದ್ದಾರೆ. ಹೀಗೆ ಪತ್ತೆ ಮಾಡಲಾದ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಅನರ್ಹ ಮತದಾರರ ಪಟ್ಟಿಯನ್ನು ತಯಾರಿಸಲಾಗುತ್ತದೆ. ಈ ಪಟ್ಟಿಯನ್ನು ಸಕಾಲಕ್ಕೆ ಚುನಾವಣೆ ಆಯೋಗಕ್ಕೆ ಸಲ್ಲಿಸಿ ಅನರ್ಹರನ್ನು ಮತ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಲಾಗುತ್ತದೆ ಎಂದು ವಿವರರಿಸಿದರು.

ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಸದ್ಯದಲ್ಲೇ ವಾರ್ಡ್ ಗಳಿಗೆ ಕಾರ್ಯಪಡೆಗಳ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಇದು ಕೇವಲ ಮತ ಚೋರಿ ಪ್ರಕರಣಗಳನ್ನು ಪತ್ತೆ ಮಾಡುವುದಷ್ಟೇ ಅಲ್ಲ. ಮತದಾನ ಹಕ್ಕಿನ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಪಡೆಯೂ ಆಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read