ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಏಪ್ರಿಲ್ 8ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಸಂವಿಧಾನದ ಪರಿ ವಿಧಿ 15ರ ಪ್ರಕಾರ ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರೀಕರ ಮಧ್ಯ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಸಂವಿಧಾನ ರಚಿಸುವಾಗಲೇ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು ಎಂದು ಹೇಳಿದ್ದಾರೆ.
ಸಂವಿಧಾನದ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥನಗಳ ಆಧಾರದ ಮೇಲೆ ತಾರತಮ್ಯ ನಿಷೇಧಿಸಲಾಗಿದೆ. ಹೀಗಿದ್ದರೂ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂವಿಧಾನ ಬಾಹಿರವಾದ ವಿಧೇಯಕ ಅಂಗೀಕರಿಸಿದೆ ಎಂದು ಟೀಕಿಸಿದ್ದಾರೆ.
2015ರಲ್ಲಿ ಆಂಧ್ರಪ್ರದೇಶ ಸರ್ಕಾರ ಧರ್ಮಾಧಾರಿತ ಮೀಸಲಾತಿ ಅಂಗೀಕರಿಸಿದಾಗ ಇದು ಕಾನೂನುಬಾಹಿರ ಎಂದು ಅಲ್ಲಿನ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ರಾಜ್ಯ ಸರ್ಕಾರ ರೂಪಿಸಿದ ವಿಧೇಯಕವು ಅಮಾನ್ಯವಾಗುತ್ತದೆ. ಒಳ ಮೀಸಲಾತಿ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರ ಮುಸ್ಲಿಮರ ಪರವಾಗಿ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿದೆ. ಇದರಿಂದ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿ ಬಯಲಾಗಿದೆ ಎಂದು ಆರೋಪಿಸಿದ್ದಾರೆ.