ವಿಷಕಾರಿ ಇಂಜೆಕ್ಷನ್ ನಿಂದ ಪೇದೆ ಮೃತಪಟ್ಟಿದ್ದನೆನ್ನಲಾದ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’

ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಳ್ಳರು ಮತ್ತು ಮಾದಕ ವ್ಯಸನಿ ಗುಂಪು ಚುಚ್ಚಿದ್ದ ವಿಷಕಾರಿ ಚುಚ್ಚುಮದ್ದಿನಿಂದ ಸಾವನ್ನಪ್ಪಿದ್ದಾರೆಂದು ನಂಬಲಾಗಿದ್ದ ಮುಂಬೈ ಪೊಲೀಸ್ ಕಾನ್ಸ್ ಟೇಬಲ್ ಸಾವಿನ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. ಮೃತ ಕಾನ್ಸ್ ಟೇಬಲ್ ವಿಶಾಲ್ ಪವಾರ್ ಮದ್ಯವ್ಯಸನಿಯಾಗಿದ್ದು ಸುಳ್ಳುಕಥೆ ಕಟ್ಟಿದ್ದರೆಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಏಪ್ರಿಲ್ 28 ರಂದು ಮಾತುಂಗಾದ ಬಾರ್‌ನಲ್ಲಿ ಮದ್ಯ ಖರೀದಿಸಲು ವಿಶಾಲ್ ಪವಾರ್ ತನ್ನ ಉಂಗುರವನ್ನು ಮಾರಾಟ ಮಾಡಿದ್ದ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಅತಿಯಾದ ಮದ್ಯಪಾನದಿಂದ ಬಹು ಅಂಗಾಂಗ ವೈಫಲ್ಯವಾಗಿದ್ದು ಇದು ಕಾನ್ಸ್ ಟೇಬಲ್ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪವಾರ್‌ನ ದರೋಡೆ ಕಥೆಗೆ ವ್ಯತಿರಿಕ್ತವಾಗಿ, ದಾದರ್ ಸರ್ಕಾರಿ ರೈಲ್ವೆ ಪೊಲೀಸರ ತನಿಖೆಯಿಂದ ಏಪ್ರಿಲ್ 27 ರ ರಾತ್ರಿ ದಾದರ್ (ಪೂರ್ವ) ದ ಬಾರ್‌ಗೆ ಹೋಗಿ ವಿಶಾಲ್ ಪವಾರ್ ಮದ್ಯ ಸೇವಿಸಿದ ನಂತರ ದಾದರ್‌ನಿಂದ ಪರೇಲ್ ರೈಲು ನಿಲ್ದಾಣದವರೆಗೆ 2 ಕಿ.ಮೀ. ದೂರ ನಡೆದು ರಾತ್ರಿ ಅಲ್ಲೇ ಮಲಗಿದ್ದ. ನಂತರ ಥಾಣೆಯಲ್ಲಿ ತನ್ನ ಸೋದರಳಿಯ ನೀಲೇಶ್ ಜೊತೆ ಮದ್ಯ ಸೇವಿಸಿ ಮನೆಗೆ ತೆರಳಿದ್ದ. ದಾದರ್ ಮತ್ತು ಥಾಣೆಯ ಬಾರ್‌ಗಳಲ್ಲಿ ಮದ್ಯ ಸೇವಿಸಿದ ಜೊತೆಗೆ ಪವಾರ್ ಮಾತುಂಗಾದಲ್ಲಿಯೂ ಮದ್ಯ ಸೇವಿಸಿದ್ದಾರೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. “ಭಾನುವಾರ ಬೆಳಿಗ್ಗೆ, ಅವರು ಪರೇಲ್‌ನಿಂದ ಮಾತುಂಗಾಗೆ ರೈಲು ಹತ್ತಿದರು. ಮಾತುಂಗಾದಲ್ಲಿ ಬೆಳಿಗ್ಗೆ 10.07 ಕ್ಕೆ ಸಾಯಿ ಕಂಟ್ರಿ ಬಾರ್‌ಗೆ ಭೇಟಿ ನೀಡಿದರು. ತನ್ನ ಬಳಿ ಹಣವಿಲ್ಲದ ಕಾರಣ ವಿಶಾಲ್ ಪವಾರ್ ತನ್ನ ಬೆಳ್ಳಿಯ ಉಂಗುರವನ್ನು ಮಾರಿ ಹಣವನ್ನು ಪಾವತಿಸಿದನು. ನಂತರ ಅವರು ಥಾಣೆಗೆ ರೈಲು ಹತ್ತಿದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ವರ್ಲಿ ಲೋಕಲ್ ಆರ್ಮ್ಸ್ ಡಿವಿಷನ್-3 ರ ಪವಾರ್ ಅವರ ಸಹೋದ್ಯೋಗಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅವರು ಪವಾರ್ ಮದ್ಯವ್ಯಸನಿಯಾಗಿದ್ದು ಪ್ರತಿದಿನ ಕುಡಿಯುತ್ತಿದ್ದರು ಎಂದು ಹೇಳಿದ್ದಾರೆ. ಕಳೆದ ಒಂದು ವರ್ಷದ ಬ್ಯಾಂಕ್ ವಹಿವಾಟಿನ ವಿವರಗಳನ್ನು ಪೊಲೀಸರು ಪಡೆದುಕೊಂಡಿದ್ದು ವಿಶಾಲ್ ಪವಾರ್ ವೈನ್ ಶಾಪ್‌ಗಳಲ್ಲಿ ಹೆಚ್ಚಾಗಿ ಹಣ ಪಾವತಿ ವ್ಯವಹಾರಗಳನ್ನು ಮಾಡಿರೋದು ಗೊತ್ತಾಗಿದೆ.

ಪೊಲೀಸರ ಪ್ರಕಾರ ಪವಾರ್ 12 ನೇ ತರಗತಿಯವರೆಗೆ ಓದಿದ್ದಾನೆ ಮತ್ತು ಕುಟುಂಬ ಕೆಲಸಕ್ಕಾಗಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು ಪಡೆದಿದ್ದನು. ತನ್ನ ಮದ್ಯದ ವ್ಯಸನವನ್ನು ಗಮನಿಸಿ ತಾನು ಶೀಘ್ರದಲ್ಲೇ ಸಾಯುತ್ತೇನೆಂದು ಭಾವಿಸಿ ಆಲ್ಕೊಹಾಲ್ ಚಟದಿಂದ ಸತ್ತರೆ ತನ್ನ ಕುಟುಂಬಕ್ಕೆ ಮಾನಹಾನಿಯಾಗುವುದಷ್ಟೇ ಅಲ್ಲದೇ ಪರಿಹಾರದ ಪ್ರಯೋಜನಗಳನ್ನು ಪಡೆಯದಿರಬಹುದು ಎಂದು ಈ ರೀತಿ ಕಟ್ಟುಕಥೆ ಕಟ್ಟಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.

ಇತ್ತೀಚಿಗೆ ಪವಾರ್ ಮದ್ಯಪಾನದಿಂದಾಗಿ ಜಾಂಡೀಸ್ ಗೆ ತುತ್ತಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರು ಹೃದಯ ಸ್ತಂಭನಕ್ಕೆ ಒಳಗಾಗಿದ್ದನ್ನ ಮತ್ತು ಅವರ ಮೂತ್ರ ವಿಸರ್ಜನೆಯು ಸ್ಥಗಿತಗೊಂಡಿರುವುದನ್ನ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮತ್ತು ದರೋಡೆ ನಡೆದಿದೆ ಎನ್ನಲಾದ ದಿನ ಪವಾರ್ ನ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿ ಮತ್ತು ಹಲವು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ದರೋಡೆಯಾಗಿದೆ ಎಂಬುದು ಕಟ್ಟು ಕಥೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಮುಂಬೈ ಪೊಲೀಸ್‌ನ ವರ್ಲಿ ಲೋಕಲ್ ಆರ್ಮ್ಸ್ ಡಿವಿಜನ್-3ರಲ್ಲಿ ನೇಮಕಗೊಂಡ ಕಾನ್ಸ್ ಟೇಬಲ್ ವಿಶಾಲ್ ಪವಾರ್ ಏಪ್ರಿಲ್ 28 ರಂದು ಮಾಟುಂಗಾ ಬಳಿ ರೈಲ್ವೆ ಮಾರ್ಗದಲ್ಲಿ ತೆರಳುತ್ತಿದ್ದಾಗ ದುರುಳರ ಗ್ಯಾಂಗ್ ಮೊಬೈಲ್ ಕಸಿದುಕೊಂಡು ವಿಷಕಾರಿ ಇಂಜೆಕ್ಷನ್ ಚುಚ್ಚಿದ್ದರು ಎಂದು ಹೇಳಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read