ವಿಜಯಪುರ: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೃಷಿ ಭೂಮಿ, ಹೆದ್ದಾರಿ, ಗ್ರಾಮಗಳೇ ಜಲಾವೃತಗೊಂಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೀಮಾನದಿ ಅಬ್ಬರ ಹೆಚ್ಚಾಗಿದ್ದು, ಸೇತುವೆಗಳು, ರಸ್ತೆಗಳು ಮುಳುಗಡೆಯಾಗಿವೆ. ವಿಜಯಪುರ- ಸೊಲ್ಲಾಪುರ ಮಾರ್ಗದ ಹೆದ್ದಾರಿ ಭೀಮಾನದಿಯ ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರ ಬಂದ್ ಆಗಿದೆ.
ವಿಜಯಪುರ-ಸೊಲ್ಲಾಪುರ ಹೈವೆಯಲ್ಲಿ ನೀರು ನಿಂತಿದ್ದು, ಹೈವೆ ಪಕ್ಕದಲ್ಲಿರುವ ಜೋಳ, ಕಬ್ಬು, ಹೆಸರು ಸೇರಿದಂತೆ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಕೃಷಿ ಭೂಮಿ ನದಿಯಂತಾಗಿದೆ. ಹೈವೆಯುದ್ದಕ್ಕೂ ನೀರು ನಿಂತಿರುವ ಪರಿಣಾಮ ಸಂಚಾರ ಸಾಧ್ಯವಾಗದೇ ವಾಹನಗಳು ಕಿಲೋಮೀಟರ್ ಗಟ್ಟಲೇ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿವೆ. ವರುಣಾರ್ಭಟಕ್ಕೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಇನ್ನೂ ಎರಡು ಮೂರು ದಿನ ಮಳೆ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ.