ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ರೀತಿಯಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಹಾಕಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ವಿಜಯಲಕ್ಷ್ಮೀ ದರ್ಶನ್ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಮಾಡಲಾಗಿದೆ. ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಕಿಡಿಗೇಡಿಗಳು ಹೇಗೆ ಅಸಭ್ಯ ಸಂದೇಶಗಳನ್ನು ರವಾನಿಸಿದ್ದರೋ ಅದೇ ರೀತಿ ವಿಜಯಲಕ್ಷ್ಮೀ ಅವರಿಗೂ ಅಸಭ್ಯವಾಗಿ, ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದೆ ರಮ್ಯಾ, ವಿಜಯಲಕ್ಷ್ಮೀ ದರ್ಶನ್ ಅಂತಾ ಅಲ್ಲ, ಯಾವುದೇ ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ಕಮೆಂಟ್ ಮಾಡಿದರೆ, ಅವಹೇಳನ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಾಲತಾಣಗಳನ್ನು ಹೆಣ್ಣುಮಕ್ಕಳ ಚಾರಿತ್ಯವಧೆ ಮಾಡಲು ಬಳಸಬೇಡಿ. ಅವಹೇಳನ ಮಾಡಿದರೆ ಜೈಲುಶಿಕ್ಷೆ ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.