ಬೆಂಗಳೂರು: ಮೀಸಲಾತಿ ವಿಚಾರವಾಗಿ ವಿಪಕ್ಷಗಳಿಗೆ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸಭೆಯಿಂದ ಸಭಾತ್ಯಾಗ ಮಾಡಿರುವ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಮೀಸಲಾತಿ ಬಗ್ಗೆ ನಮಗೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ಈ ನಡೆಯನ್ನು ಖಂಡಿಸಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಹೇಳಿ ವಿಧಾನಸಭೆ ಕಲಾಪದಿಂದ ಹೊರನಡೆಯುತ್ತಿದಂತೆ ಬಿಜೆಪಿ, ಜೆಡಿಎಸ್ ಸದಸ್ಯರು ಅವರನ್ನು ಹಿಂಬಾಲಿಸಿದರು.
ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ದಲಿತರಿಗೆ ಒಳಮೀಸಲಾತಿ ಐತಿಹಾಸಿಕ ನಿರ್ಧಾರ. ಸರ್ವ ಜನಾಂಗ ಸಂತೋಷ ಪಡಿಸುವ ನಿರ್ಧಾರ. ಹೇಗಾದರೂ ಮಾಡಿ ಗೊಂದಲ, ರಾಜಕೀಯ ಮಾಡಬೇಕು ಎಂಬುದು ಬಿಜೆಪಿ ಉದ್ದೇಶ. ಸಿಎಂ ಸಿದ್ದರಾಮಯ್ಯ ಅವರ ಮಾತನು ಸದಸ್ಯರು, ಜನರೇ ಸ್ವಾಗತಿಸಿದ್ದಾರೆ. ಒಳ ಮೀಸಲಾತಿ ಸೂತ್ರವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ಬಿಜೆಪಿ ಸಭಾತ್ಯಾಗ ರಾಜಕೀಯ ನಾಟಕ. ಇದು ವಿವೇಕದ ನಡೆ ಅಲ್ಲ ಎಂದು ಗುಡುಗಿದರು.