ಹಾವೇರಿ: ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿ ಭಾನುವಾರ ನಡೆದಿದೆ.
ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ, ಧಾರವಾಡ ಜಿಲ್ಲೆಗಳ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಲೋಡ್ ಮಾಡಿಕೊಂಡು ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ವಾಹನ ತೆರಳುತ್ತಿತ್ತು.
ಬಂಕಾಪುರ ಟೋಲ್ ಸಮೀಪ ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ವಾಹನ ಪಲ್ಟಿಯಾಗಿದೆ. ಉತ್ತರ ಪತ್ರಿಕೆಯ ಬಂಡಲ್ ಗಳನ್ನು ಸುರಕ್ಷಿತವಾಗಿ ಬೇರೆ ವಾಹನದಲ್ಲಿ ಬೆಂಗಳೂರು ಪ್ರೌಢಶಾಲಾ ಬೋರ್ಡ್ ಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರ ಬಂಕಾಪುರ ಟೋಲ್ ಗೇಟ್ ಹತ್ತಿರ ಅಪಘಾತ ಸಂಭವಿಸಿದ್ದು, ಚಾಲಕ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉತ್ತರ ಪತ್ರಿಕೆಗಳ ಬಂಡಲ್ ಗಳನ್ನು ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸುರಕ್ಷಿತವಾಗಿ ಸಾಗಿಸಲಾಗಿದೆ.