ಮಂಗಳೂರು: ಇನ್ನು ಒಂದೂವರೆ ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸಂಚಾರಕ್ಕೆ ಲಭ್ಯವಾಗಲಿದೆ. ಅದರಲ್ಲಿ ಒಂದನ್ನು ಮಂಗಳೂರಿಗೆ ನೀಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಶನಿವಾರ ಮಂಗಳೂರು ಸೆಂಟ್ರಲ್ -ಕಬಕ ಪುತ್ತೂರು -ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸುಬ್ರಹ್ಮಣ್ಯ ರೋಡ್ ನಿಲ್ದಾಣವರೆಗಿನ ವಿಸ್ತರಣೆಗೆ ಗ್ರೀನ್ ಸಿಗ್ನಲ್ ತೋರಿಸಿ ಅವರು ಮಾತನಾಡಿದರು.
ಹಾಸನ- ಮಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯ ಮಾರ್ಗದವರೆಗೆ ಹೊಸ ಮಾರ್ಗ ರಚನೆಗೆ ಎರಡು ಸಾವಿರ ಕೋಟಿ ರೂ.ಗಳ ಡಿಪಿಅರ್ ಗೆ ಸೂಚಿಸಲಾಗಿದೆ. ಇಲ್ಲಿ ರೈಲ್ವೆ ಹಾಗೂ ರಸ್ತೆ ಮಾರ್ಗ ಜೊತೆ ಜೊತೆಯಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಭೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮಾದರಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಇದ್ದು, ಇದು ಪೂರ್ಣಗೊಂಡಲ್ಲಿ ಮಂಗಳೂರು- ಬೆಂಗಳೂರು ನಡುವೆ ಎರಡು ವಂದೇ ಭಾರತ್ ರೈಲು ಸಂಚಾ ನಡೆಸಿದರೂ ಅಚ್ಚರಿ ಇಲ್ಲ ಎಂದು ಸೋಮಣ್ಣ ತಿಳಿಸಿದ್ದಾರೆ.