ಬೆಂಗಳೂರು: ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರವಗಿ ಚರ್ಚೆಗಳು ಆರಂಭವಾಗಿದ್ದು, ಈ ಬಗ್ಗೆ ಸ್ವತಃ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನಗೆ ಮಾಹಿತಿ ಇಲ್ಲ. ಎರಡು ಕಡೆ ಸೋತವನಿಗೆ ಮೂರನೇ ಕಡೆ ಟಿಕೆಟ್ ಕೊಟ್ಟರು. ಲೋಕಸಭೆ ಚುನಾವಣೆಯಲ್ಲಿ ತುಮಕೂರಿನ ಜನ ನನ್ನ ಕೈ ಹಿಡಿದರು ಎಂದಿದ್ದಾರೆ.
ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಜನರ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಪಕ್ಷ ನಮ್ಮೆಲ್ಲರಿಗಿಂತ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ದದು. ಪ್ರಧಾನಿ ನರೇಂದ್ರ ಮೋದಿಯವರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಯಾರಿಗೆ ಯಾವ ಸ್ಥಾನ ಕೊಡಬೇಕು ಎಂದು ವರಿಷ್ಠರಿಗೆ ಗೊತ್ತಿದೆ. ಯಾರ್ಯಾರು ನನ್ನ ಪರ ಮಾತನಾಡಿದ್ದಾರೋ ಅವರಿಗೆ ಆಭಾರಿ. ಪಕ್ಷದಲ್ಲಿ ಎಷ್ಟು ಬಣ ಇದೆ ಗೊತ್ತಿಲ್ಲ. ಒಳ್ಳೆಯತನಕ್ಕೆ ಮಾತ್ರ ಬೆಲೆ ಎಂದು ಹೇಳಿದರು.