ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕರಾವಳಿ ಜಿಲ್ಲೆಯ 280ಕ್ಕೂ ಅಧಿಕ ಜನರಿಗೆ ವಂಚಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ನಗರ ಅಪರಾಧ ಪತ್ತೆ ದಳದ ಪೊಲೀಸರು ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ನವೀಮುಂಬೈನ ಕೋಪರ್ ಕೈರಾನೆ ವಾಸಿ ದಿಲ್ ಶಾದ್ ಅಬ್ಬುಲ್ ಸತ್ತಾರ್ ಖಾನ್(45), ಥಾಣೆ ಡೊಂಬಿವಿಲಿ ನಿವಾಸಿ ಕಿಶೋರ್ ಕುಮಾರ್ ಯಾನೆ ಅನಿಲ್ ಕುಮಾರ್(34) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮಂಗಳೂರಿನ ಬೆಂದೂರ್ ವೆಲ್ ನಲ್ಲಿ ಹೈಯರ್ ಗ್ಲೋ ಎಲಿಗೆಂಟ್ ಓವರ್ ಸೀಸ್ ಇಂಟರ್ ನ್ಯಾಷನಲ್ ಲಿ. ಎಂಬ ಕಚೇರಿ ತೆರೆದು ಮಾಧ್ಯಮ ಮೂಲಕ ಜಾಹೀರಾತು ನೀಡಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದುಕೊಂಡಿದ್ದರು. ಕೆಲವರು 2-5 ಲಕ್ಷ ರೂ.ವರೆಗೂ ಹಣ ಕೊಟ್ಟಿದ್ದರೂ ಆರೋಪಿಗಳು ಉದ್ಯೋಗ ಕೊಡಿಸಿರಲಿಲ್ಲ. ಈ ಬಗ್ಗೆ ಸಂತ್ರಸ್ತರು ಆರೋಪಿಗಳ ಬಳಿ ಕೇಳಿದರೂ ಸ್ಪಂದಿಸಲಿಲ್ಲ. ನಂತರ ಕದ್ರಿ ಠಾಣೆಗೆ ದೂರು ನೀಡಿದ್ದರು. ಫೆಬ್ರವರಿ ತಿಂಗಳಲ್ಲಿ 289 ಜನರಿಗೆ 4.50 ಕೋಟಿ ರೂ. ವಂಚಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.