ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಮುಖ್ಯ ಶಿಕ್ಷಕ ವೀರೇಶ ಹಿರೇಮಠ ಅಮಾನವೀಯವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಘಟನೆಯಿಂದ ನೊಂದಿದ್ದ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಗ್ರಾಮಸ್ಥರು ವಿಷಯ ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಸಂಸ್ಕೃತ ಪಾಠ ಶಾಲೆಗೆ ಮುತ್ತಿಗೆ ಹಾಕಿ ಇಒ ಗಂಗಾಧರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿಕ್ಷಕ ವೀರೇಶನಿಗೆ ಸಂಸ್ಕೃತ ಬರುವುದಿಲ್ಲ, ಶಾಲೆಯಲ್ಲಿಯೂ ಇರುವುದಿಲ್ಲ. ಪೂಜೆ, ವಾಮಾಚಾರ ಮಾಡಲು ಹೋಗುತ್ತಾನೆ. ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಫೆಬ್ರವರಿಯಲ್ಲಿ ನಡೆದಿದ್ದು, ನೊಂದ ಬಾಲಕ ಕೆರೆ ಬಳಿಗೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಆಟೋ ಚಾಲಕರೊಬ್ಬರು ಆತನನ್ನು ರಕ್ಷಿಸಿದ್ದಾರೆ. ನಂತರ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿಯಿಂದ ಬಾಲಕನ ಅಜ್ಜಿ ಬಂದು ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಸದ್ಯ ಬಾಲಕ ಗುಡಿಕೋಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಎಲ್ಲರೂ ಸೇರಿ ಪ್ರಕರಣ ಮೆಚ್ಚಿ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ವಿಡಿಯೋ ವೈರಲ್ ಆದ ಬಳಿಕ ನಾಪತ್ತೆಯಾಗಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಈ ಶಾಲೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಸಂಬಂಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ದೂರು ಬರದಿದ್ದರೂ ಎಲ್ಲಾ ಸಂಸ್ಕೃತ ಶಾಲೆಗಳ ಬಗ್ಗೆ ಗಮನಹರಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೂ ಹಲ್ಲೆ ಮಾಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.