ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಗೊಂಡಿದ್ದ ಧಾರವಾಡ ಹೆಚ್ಚುವರಿ ಎ ಎಸ್ ಪಿ ನಾರಾಯಣ ಭರಮಣಿ ಅವರನ್ನು ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಮಾವೇಶಕ್ಕೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರಿಂದ ಕೋಪಗೊಂಡ ಸಿಎಂ ಸಿದ್ದರಾಮಯ್ಯ, ಅಂದು ಭದ್ರತೆಗೆ ನಿಯೋಜಿಸಿದ್ದ ಧಾರವಡದ ಹೆಚ್ಚುವರಿ ಎ ಎಸ್ ಪಿ ನಾರಯಣ ಭರಮಣಿಯವರನ್ನು ವೇದಿಕೆಗೆ ಕರೆದು ಕಪಾಳಮೋಕ್ಷ ಮಾಡುವ ರೀತಿಯಲ್ಲಿ ಕೈ ಎತ್ತಿದ್ದರು. ಇದರಿಂದ ನಾರಾಯಣ ಭರಮಣಿ ಅವಮಾನಿತರಾಗಿ ನೊಂದು ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ, ಸ್ವಯಂ ನಿವೃತ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕಾರಿಗಳು, ಸಚಿವರು ನಾರಾಯಣ ಭರಮಣಿ ಅವರ ಮನವೊಲಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಎ ಎಸ್ ಪಿಯಾಗಿದ್ದ ನಾರಾಯಣ ಭರಮಣಿ ಅವರನ್ನು ಬೆಳಗಾವಿ ಕಾನೂನೂ ಸುವ್ಯವಸ್ಥೆ ವಿಭಾಗದ ಡಿಎಸ್ ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿಸಲಾಗಿದೆ.
ಈ ಹಿಂದೆ ನಾರಾಯಣ ಭರಮಣಿ, ಬೆಳಗಾವಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಡಿಎಸ್ ಪಿಯಾಗಿ ಬೆಳಗಾವಿಗೆ ವರ್ಗಾವಣೆಗೊಂಡಿದ್ದಾರೆ.