ಕಾರವಾರ: ರೈಲಿನಲ್ಲಿ ಸಹಪ್ರಯಾಣಿಕನಂತೆ ಬಂದು ಕುಳಿತ ವ್ಯಕ್ತಿಯೊಬ್ಬ ಮತ್ತು ಬರುವ ಚಾಕೋಲೇಟ್ ನೀಡಿ 4. 86 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಕಾರವಾರ-ಮಂಗಳೂರು ರೈಲಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಹರೀಶ್ ಎಂಬುವವರು ಆ.10 ರಂದು ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ತೆರಳಿದ್ದರು. ಈ ವೇಳೆ ಭಟ್ಕಳದಲ್ಲಿ ರೈಲು ಹತ್ತಿದ್ದ 35 ವರ್ಷದ ಅಪರಿಚಿತ ವ್ಯಕ್ತಿಯೋರ್ವ ಹರೀಶ್ ಜೊತೆ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಸ್ನೇಹದ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಚಾಕೋಲೇಟ್ ಅನ್ನು ಹರೀಶ್ ಗೆ ನೀಡಿದ್ದಾನೆ. ಅದನ್ನು ಸೇವಿಸಿದ ಹರೀಶ್ ಕೆಲ ಸಮಯದಲ್ಲೇ ನಿದ್ದೆಗೆ ಜಾರಿದ್ದಾರೆ.
ನಿದ್ದೆಯಿಂದ ಎಚ್ಚೆತ್ತು ನೋಡಿದಾಗ ಅವರ ಕೈಯಲ್ಲಿದ್ದ ಪರಸ್, ಬ್ಯಾಗ್ ಹಾಗೂ ಕತ್ತಿನಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಉಂಗುರ ಎಲ್ಲವೂ ಮಾಯವಾಗಿದ್ದವು. ಸುಮಾರು 28ಗ್ರಾಂ ನ 2,35,000 ರೂ. ಬೆಲೆಬಾಳುವ ಚ್ನ್ನದ ಚೈನ್ , 8 ಗ್ರಾಂ ತೂಕದ 70 ಸಾವಿರ ಬೆಲೆಬಾಳುವ ಉಂಗುರ, ವಾಚ್, ಮೊಬೈಲ್, ಪರ್ಸ್, ಹಾಗೂ ಬ್ಯಾಗ್ ನಲ್ಲಿದ್ದ 145,000 ರೂ. ನಗದು ಹಣ ಎಲ್ಲವನ್ನೂ ಕದ್ದು ವ್ಯಕ್ತಿ ಪರಾರಿಯಾಗಿದ್ದಾನೆ.
ಹಣ ಚಿನ್ನಾಭರಣಗಳನ್ನು ಕಳೆದುಕೊಂಡ ಹರೀಶ್ ಅಪರಿಚಿತ ಪ್ರಯಾಣಿಕನ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.