ಲಖನೌ: ಹೆಡ್ ಫೋನ್ ಹಾಕಿಕೊಂಡು ಹಳಿ ದಾಟುತ್ತಿದ್ದ 16 ವರ್ಷದ ಬಾಲಕನ ಮೇಲೆ ರೈಲು ಹರಿದು ಹೋಗಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಉದೈನ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಮೃತ ಬಾಲಕನನ್ನು ಅರವಿಂದ್ ರಾಜಭರ್ ಎಂದು ಗುರುತಿಸಲಾಗಿದೆ. ಬಾಲಕ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮ್ಯೂಸಿಕ್ ಕೇಳುತ್ತಾ ರೈಲ್ವೆ ಹಳಿ ದಾಟುತ್ತಿದ್ದ. ಈ ವೇಳೆ ಏಕಾಏಕಿ ರೈಲು ಬಂದಿದ್ದು ಗೊತ್ತಾಗಿಲ್ಲ. ವೇಗವಾಗಿ ಬಂದ ತಪತಿ ಗಂಗಾ ಎಕ್ಸ್ ಪ್ರೆಸ್ ರೈಲು ಬಾಲಕನ ಮೇಲೆ ಹರಿದು ಹೋಗಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಸುರಕ್ಷತಾ ದಳದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.