ಕೊಯಮತ್ತೂರು: ತಮಿಳುನಾಡಿನ ವೆಳ್ಳಿಯಂಗಿರಿ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದಾಗ 15 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದಿಂಡಿಗಲ್ ಮೂಲದ ಎಂ. ವಿಶ್ವ, ಮಂಗಳವಾರ ಮುಂಜಾನೆ ಬೆಟ್ಟದ ಕೆಳಭಾಗದಲ್ಲಿ ತಂದೆಯ ಎದುರೇ ಕೊನೆಯುಸಿರೆಳೆದಿದ್ದಾನೆ. ಈ ವರ್ಷದಲ್ಲಿ ವೆಳ್ಳಿಯಂಗಿರಿ ಬೆಟ್ಟದಲ್ಲಿ ಸಂಭವಿಸಿದ ಐದನೇ ಸಾವು ಇದಾಗಿದೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ವಿಶ್ವ, ತನ್ನ ತಂದೆ ಮುರುಗನ್ ಮತ್ತು ಐವರು ಸಂಬಂಧಿಕರೊಂದಿಗೆ ಸೋಮವಾರ ಸಂಜೆ ಚಿತ್ರೈ ಪೂರ್ಣಿಮೆಯಂದು ಸುಮಾರು 4 ಗಂಟೆಗೆ ಏಳು ಬೆಟ್ಟಗಳನ್ನು ಹತ್ತಲು ಪ್ರಾರಂಭಿಸಿದ್ದರು. ಅವರು ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಮೂರನೇ ಬೆಟ್ಟದಿಂದ ಕೆಳಗಿಳಿಯುತ್ತಿದ್ದಾಗ, ಮಂಗಳವಾರ ಮುಂಜಾನೆ ಸುಮಾರು 3.30 ರ ಸುಮಾರಿಗೆ ವಿಶ್ವ ಮೂರ್ಛೆ ಹೋಗಿದ್ದು, ಬೆಟ್ಟದ ಕೆಳಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಬಳಿಕ ಪರಿಶೀಲಿಸಿ ಮೃತರೆಂದು ಘೋಷಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಆಲಂದುರೈ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
“ಸುಮಾರು 7 ಕಿಲೋಮೀಟರ್ ದೂರವಿರುವ ಏಳು ಬೆಟ್ಟಗಳನ್ನು ಹತ್ತುತ್ತಿದ್ದಾಗ ಮತ್ತು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ವಿಶ್ವ ವಾಂತಿ ಮಾಡಿಕೊಂಡಿದ್ದನು. ಕೆಳಗಿಳಿಯಲು ಪ್ರಾರಂಭಿಸಿದಾಗ ಅವನು ಸ್ವಲ್ಪ ಉತ್ತಮವಾಗಿದ್ದರೂ, ಆರನೇ ಮತ್ತು ಐದನೇ ಬೆಟ್ಟದಲ್ಲಿ ಮತ್ತೆ ವಾಂತಿ ಮಾಡಿಕೊಂಡನು” ಎಂದು ಆಲಂದುರೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಲು ಸಾಧ್ಯ” ಎಂದು ಅಧಿಕಾರಿ ತಿಳಿಸಿದ್ದಾರೆ. ಫೆಬ್ರವರಿ 1, 2025 ರಿಂದ ವೆಳ್ಳಿಯಂಗಿರಿ ಬೆಟ್ಟವನ್ನು ಹತ್ತುತ್ತಿದ್ದಾಗ ವಿವಿಧ ಆರೋಗ್ಯ ಸಮಸ್ಯೆಗಳಿಂದ ಒಟ್ಟು ಐವರು ಭಕ್ತರು ಸಾವನ್ನಪ್ಪಿದ್ದಾರೆ.