ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ಕೊಂದು ಮನೆಗೆ ಬೆಂಕಿ ಹಚ್ಚಿದ್ದಾನೆ. ತನ್ನ ಕುಟುಂಬದ ಸದಸ್ಯರು ಸೇರಿದಂತೆ 5 ಜನರನ್ನು ಕೊಂದಿದ್ದಾನೆ. ಆತನೂ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿಹಿನ್‌ಪುರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಟೆಪ್ರಾಹಾ ಗ್ರಾಮದಲ್ಲಿ ಬುಧವಾರ ಈ ಭಯಾನಕ ಘಟನೆ ಸಂಭವಿಸಿದೆ.
ವಿಜಯ್ ಎಂದು ಗುರುತಿಸಲಾದ ಆರೋಪಿ ಮೊದಲು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದು, ನಂತರ ತನ್ನನ್ನು, ತನ್ನ ಹೆಂಡತಿ ಮತ್ತು ಇನ್ನೂ ಇಬ್ಬರು ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದ್ದಾನೆ.
ಬೆಂಕಿ ಬೇಗನೆ ಕಟ್ಟಡವನ್ನು ಆವರಿಸಿ, ಅವರನ್ನು ಬೂದಿ ಮಾಡಿತು. ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬಂದರಾದರೂ ಬೆಂಕಿ ಜೀವಗಳನ್ನು ಬಲಿ ತೆಗೆದುಕೊಂಡಿತ್ತು.
ಮಾಹಿತಿ ಪಡೆದ ನಂತರ ಸ್ಥಳಕ್ಕೆ ತಲುಪಿದ ಪೊಲೀಸ್ ತಂಡ, ಇದುವರೆಗೆ ಮೂರು ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವಶೇಷಗಳಲ್ಲಿ ಇತರ ಶವಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿದೆ.
ಗ್ರಾಮಸ್ಥರಾದ ರಾಮಚಂದ್ರ ಯಾದವ್, ವಿಜಯ್ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮತ್ತು ಇತ್ತೀಚಿನ ದಿನಗಳಲ್ಲಿ ಆತಂಕಗೊಂಡಂತೆ ಇದ್ದ. ಮೊದಲು ಇಬ್ಬರು ಮಕ್ಕಳನ್ನು ಕೊಂದು ನಂತರ ಮನೆಗೆ ಬೆಂಕಿ ಹಚ್ಚಿದ್ದು, ಒಳಗಿದ್ದವರೆಲ್ಲರೂ ಸಿಕ್ಕಿಬಿದ್ದರು ಎಂದು ಹೇಳಿದ್ದಾರೆ.
ಸೂರಜ್(14) ಮತ್ತು ಸನ್ನಿ(13) ಅವರನ್ನು ಕರೆದು ಬೆಳ್ಳುಳ್ಳಿ ಬೀಜಗಳನ್ನು ಬಿತ್ತಲು ಕೇಳಿದ್ದರು. ಆದರೆ, ಇಬ್ಬರೂ ಹುಡುಗರು ಮಹಾನವಮಿ ಕಾರಣ ನಿರಾಕರಿಸಿದ್ದರು. ಕೋಪದ ಭರದಲ್ಲಿ ವಿಜಯ್, ಸೂರಜ್ ಮತ್ತು ಸನ್ನಿ ಇಬ್ಬರನ್ನೂ ಕೊಂದು ನಂತರ ಮನೆಗೆ ಬೆಂಕಿ ಹಚ್ಚಿದ್ದಾನೆ. ಆರು ಜನ ಸಾವನ್ನಪ್ಪಿದ್ದಾರೆ. ಬೆಂಕಿಯಲ್ಲಿ ನಾಲ್ಕು ದನಗಳು ಕೂಡ ಸಾವನ್ನಪ್ಪಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.