ಮುಂಬೈ: ವೃದ್ಧ ತಂದೆ, ತಾಯಿಯನ್ನು ಮಕ್ಕಳು ನೋಡಿಕೊಳ್ಳದೆ ಬೀದಿಗೆ ಬಿಡುವ ಅಮಾನವೀಯ ಘಟನೆಗಳು ಹೆಚ್ಚುತ್ತಿವೆ. ಇದರ ನಡುವೆಯೇ ಮಹಾರಾಷ್ಟ್ರದ ಜುನ್ನಾರ್ ನ ಜಿಲ್ಲಾ ನ್ಯಾಯಾಲಯ ವೃದ್ದ ತಂದೆ, ತಾಯಿ ನೋಡಿಕೊಳ್ಳದ ಪುತ್ರನಿಗೆ ಮೂರು ತಿಂಗಳು ಜೈಲು ಶಿಕ್ಷೆ, 5,000 ರೂ. ದಂಡ ವಿಧಿಸುವ ಮೂಲಕ ಕಠಿಣ ಸಂದೇಶ ರವಾನಿಸಿದೆ.
70 ವರ್ಷದ ವೃದ್ದ ದಂಪತಿ ಈ ಕುರಿತಾಗಿ ದೂರು ನೀಡಿದ್ದರು. ಇಬ್ಬರೂ ಮಕ್ಕಳು ತಮ್ಮ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸದೆ ಮನೆಯಿಂದ ಹೊರ ಹಾಕಲು ಮುಂದಾಗಿದ್ದಾರೆ. ಕಿರಿಯ ಪುತ್ರ ನಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದರಿಂದ 51 ಗುಂಟೆ ಜಾಗವನ್ನು ಅವನ ಹೆಸರಿಗೆ ಮಾಡಿದ್ದೆವು. ಆದರೂ ಮನೆಯಿಂದ ಹೊರ ಹಾಕಿದ್ದಾನೆ. ಹಣವನ್ನು ಕೂಡ ಪಡೆದುಕೊಂಡಿದ್ದಾನೆ ಎಂದು 2023ರ ಮೇ 13 ರಂದು ದೂರು ನೀಡಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಪುತ್ರನ ನಡವಳಿಕೆ ಆಕ್ಷೇಪಾರ್ಹ ಎನ್ನುವುದು ಸಾಬೀತಾಗಿದ್ದರಿಂದ ಆತನನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿದ್ದು, ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
