ಬೆಂಗಳೂರು : ಇಂದಿನ ರಾಜಕಾರಣಿಗಳು ದೈವಿ ಸ್ವರೂಪದವರಾಗುತ್ತಿದ್ದಾರೆ. ವ್ಯಕ್ತಿಗಳ ವಿಜೃಂಭಣೆಯಾಗುತ್ತಿದೆ. ಅದು ಹಾಗಾಗಬಾರದು. ಸಂವಿಧಾನದ ಪ್ರಕಾರವೇ ಎಲ್ಲ ನಡೆಯಬೇಕೇ ಹೊರತು, ವ್ಯಕ್ತಿಯ ಇಚ್ಛೆಯಂತಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ನಿರ್ಮಾಣಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಅನಾವರಣೆಗೊಳಿಸಿ ಮಾತನಾಡಿದರು.
ನಾವೆಲ್ಲ ಇಂದು ಗೆದ್ದು ಬಂದಿರುವುದು ಸಂವಿಧಾನದ ಪ್ರಕಾರದಂತೆ ವಿನಾ ಯಾವುದೇ ದೈವದಿಂದಲ್ಲ.ಭಕ್ತಿ ವ್ಯಕ್ತಿಯ ಮೇಲೆ ಬಂದರೆ ಆತ ಸರ್ವಾಧಿಕಾರಿಯಾಗುತ್ತಾನೆ. ಅಂತಹ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನ ಕೊನೆಯ ಭಾಷಣದಲ್ಲಿ ಹೇಳಿದ್ದಾರೆ.
ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ತಿದ್ದುಪಡಿಗಳನ್ನು ತರಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಸಮಾನವಾಗಿ ಸಿಗಬೇಕು ಎನ್ನುವ ಆಶಯಕ್ಕೆ ಧಕ್ಕೆಯಾಗಿಲ್ಲ. ಆದರೆ, ಕೆಲ ದುಷ್ಟ ಸಿದ್ಧಾಂತಗಳು ಬಸವ ಹಾಗೂ ಅಂಬೇಡ್ಕರ್ ಅವರ ಆಶಯಗಳ ವಿರುದ್ಧ ನಡೆಯುತ್ತಿವೆ. ಅವುಗಳ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಸಂವಿಧಾನ ನಮ್ಮೆಲ್ಲರ ಹಕ್ಕು. ಅದನ್ನು ರಕ್ಷಿಸಿಕೊಂಡು ಮುಂದುವರೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿರಲಿದೆ ಎಂದರು.