Independence Day : ಇಂದಿನ ಪೀಳಿಗೆಗೆ ತ್ಯಾಗ, ಬಲಿದಾನ, ಹೋರಾಟಗಳ ಸ್ಮರಣೆ ಅಗತ್ಯ : ಸಚಿವ ಬಿ.ನಾಗೇಂದ್ರ

ಬಳ್ಳಾರಿ : ಪರಕೀಯರ ಆಡಳಿತದಿಂದ ದೇಶವು ಬಿಡುಗಡೆಗೊಂಡ ಈ ಸುದಿನದಂದು, ಜನ ಸಾಮಾನ್ಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವರಾಜ್ಯ ತತ್ವ ಬೆಳೆಸಲು ಸ್ಪೂರ್ತಿ ತುಂಬಿದ ಚಾರಿತ್ರಿಕ ಗಳಿಗೆಯಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನಗೈದು ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.

ನಗರದ ವಿಮ್ಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಅವರು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿಯವರು ಅಹಿಂಸವಾದ ಮೂಲಕ ಜನರಲ್ಲಿ ಮೂಡಿಸಿ ಜಾಗೃತಿಗೊಳಿಸಲು ಸಮರ್ಪಣ ಮನೋಭಾವದಿಂದ ಭಾಗವಹಿಸಲು ಬಳ್ಳಾರಿಗೆ 1921 ಅಕ್ಟೋಬರ್ 01 ರಂದು ಭೇಟಿ ಇತ್ತಾಗ ಸುಮಾರು 08 ಗಂಟೆಗಳ ಕಾಲ ತಂಗಿದ್ದರು ಹಾಗೂ ಬಾಲ ಗಂಗಾಧರ ತಿಲಕ್ರಂತಹ ರಾಷ್ಟ್ರ ನಾಯಕರುಗಳು ಬಳ್ಳಾರಿಗೆ ಅಗಮಿಸಿದ್ದರು ಎನ್ನುವುದು ರೋಚಕದ ಸಂಗತಿಯಾಗಿದೆ ಎಂದು ಸ್ಮರಿಸಿದರು.

ಸ್ವಾತಂತ್ರ್ಯೋತ್ಸವನ್ನು ಕೇವಲ ಸಂಭ್ರಮಿಸಿದರೆ ಸಾಲದು ದೇಶದ ಪ್ರಗತಿಗೆ ತನು, ಮನ, ಧನ, ಸಮರ್ಪಣ ಮನೋಭಾವದಿಂದ ದೇಶದ ರಕ್ಷಣೆಗೆ ಕಂಕಣ ಬದ್ದರಾಗಬೇಕಾಗಿದೆ. ದಾಸ್ಯ, ಮೌಢ್ಯವನ್ನು, ಅಳಿಸಿ ಹಾಕಿ ಆಧುನಿಕ ಭಾರತ, ವೈಜ್ಞಾನಿಕ ಭಾರತ, ಸಮೃದ್ದಿ ಭಾರತವನ್ನು ಕಟ್ಟಬೇಕಾಗಿದೆ. ಯುವ ಸಮುದಾಯದಲ್ಲಿ ಭಾರತೀಯತೆ ಜೊತೆಗೆ ವಿಶ್ವ ಮಾನವ ಸಂದೇಶವನ್ನು ಸಾರಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಬಳ್ಳಾರಿಯ ಅಲ್ಲಿಪುರ ಜೈಲಿನಲ್ಲಿ ನೂರಾರು ಸತ್ಯಾಗ್ರಹಿಗಳನ್ನು ಬಂಧಿಸಲಾಗಿತ್ತು. ಅದರಲ್ಲಿ ಚಕ್ರವರ್ತಿ ರಾಜಗೋಪಾಲಚಾರಿ, ಕಾಮರಾಜ್, ಟಿ.ವಿ.ಸುಬ್ಬಾಶೆಟ್ಟಿ, ಬೆಜವಾಡ ಗೋಪಾಲರೆಡ್ಡಿ ಮುಂತಾದ ಅಗ್ರಗಣ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಇರಿಸಲಾಗಿತ್ತು ಎಂಬುದು ಇತಿಹಾಸದಿಂದ ವೇದ್ಯವಾಗುತ್ತದೆ.
ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರ್ಲಾಲ್ ನೆಹರು, ಸರ್ದಾರ್ ವಲ್ಲಬಾಯಿ ಪಟೇಲ್, ನೇತಾಜಿ ಸುಭಾಸ್ ಚಂದ್ರ ಭೋಸ್, ದಾದಾಬಾಯಿ ನವರೋಜಿ, ಮೌಲಾನ ಅಬ್ದುಲ್ ಕಲಾಂ ಆಝಾದ್, ಬಾಲಗಂಗಾಧರ ತಿಲಕ್, ಅರವಿಂದ್ ಘೋಷ್, ಬಿಪಿನ್ ಚಂದ್ರಪಾಲ್, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ಸಿಂಗ್, ಚಂದ್ರಶೇಖರ ಆಜಾದ್, ರಾಜ್ಗುರು, ಸುಖ್ದೇವ್, ಝಾನ್ಸಿರಾಣಿ ಲಕ್ಷ್ಮೀಬಾಯಿ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಾವಿರಾರು ಕನ್ನಡಿಗರು ತಮ್ಮ ಜೀವನಕ್ಕಿಂತ ಸ್ವಾತಂತ್ರ್ಯ ಹೆಚ್ಚು ಮೌಲ್ಯಯುತ ಎಂದು ನಂಬಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ತಮ್ಮ ಶೌರ್ಯವನ್ನು ಮೆರೆದಿದ್ದಾರೆ. ಅದರಲ್ಲಿ ನಮ್ಮ ಬಳ್ಳಾರಿ ಜಿಲ್ಲೆಯ ಟಿ.ಸುಬ್ರಮಣ್ಯಂ, ಟಿ.ಬಿ.ಕೇಶವರಾವ್, ಕೊಟ್ಟೂರಿನ ಗೋರ್ಲಿ ಶರಣಪ್ಪ, ಗೋರ್ಲಿ ರುದ್ರಮ್ಮ, ಡಾ.ಎ.ನಂಜಪ್ಪ, ಚಿದಾನಂದ ಶಾಸ್ತ್ರಿ, ಕೊ.ಚನ್ನಬಸಪ್ಪ, ಗೌಡಪ್ಪ, ಬಿಂಧು ಮಾದವರಾವ್, ಬುರ್ಲಿ ಶೇಖಣ್ಣ, ಬೆಲ್ಲದ ಚೆನ್ನಪ್ಪ, ಬೂಸಲ ಸಾಂಬಮೂರ್ತಿ, ಹಡಪದ ತಿಮ್ಮಪ್ಪ, ಬಂಡಿಹಟ್ಟಿ ವೆಂಕೋಬರಾವ್, ಲಕ್ಷ್ಮಿದೇವಿ ಇನ್ನು ಮುಂತಾದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಾವಿಂದು ನೆನೆಯಬೇಕಾಗಿದೆ ಎಂದರು.

ಭಾರತದಂತಹ ವಿಶಾಲವಾದ ರಾಷ್ಟ್ರ ವೈವಿಧ್ಯತೆಯ ಮಧ್ಯೆಯೂ ಅದ್ವಿತೀಯವಾದ ಅಖಂಡತೆಯನ್ನು ಉಳಿಸಿಕೊಂಡು ವಿಶ್ವದ ಪ್ರಮುಖ ಅಭಿವೃದ್ದಿ ಶೀಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ ನಮ್ಮ ಸಂವಿಧಾನಿಕ ವ್ಯವಸ್ಥೆಯಲ್ಲಿ ಸಾರ್ವಭೌಮ ಅಧಿಕಾರವು ಪ್ರಜೆಗಳಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಮಹೋನ್ನತ ಮೌಲ್ಯಗಳಿಂದ ದೇಶವು ಕಳೆದ 76 ವರ್ಷಗಳ ಅವಧಿಯಲ್ಲಿ ತನ್ನ ಅಖಂಡತೆಯೊಂದಿಗೆ ಆರ್ಥಿಕ ಆಯಾಮಗಳನ್ನೊಳಗೊಂಡ ಸವಾರ್ಂಗೀಣ ವಿಕಾಸದೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಬಂದ ನಂತರ ದೇಶದ ಕಠಿಣ ಸಮಸ್ಯೆಗಳನ್ನು ಬಗೆಹರಿಸಲು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿಯತ್ತ ಪ್ರಯತ್ನ ಸಾಗಿತು. ಎಲ್ಲಾ ಸವಾಲುಗಳ ಮಧ್ಯದಲ್ಲಿಯೂ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪಗೊಂಡಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಕೈಗಾರಿಕೆ, ಕೃಷಿ, ಸಾಕ್ಷರತೆ, ತಂತ್ರಜ್ಞಾನ (ಐ.ಟಿ.ಬಿ.ಟಿ), ಆರೋಗ್ಯ, ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ, ಬಾಹ್ಯಾಕಾಶ ವಿಜ್ಞಾನ, ಅಣು ವಿಜ್ಞಾನ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವಂತಹ ಪ್ರಗತಿ ಸಾಧಿಸಲಾಗಿದೆ. ಉದಾಹರಣೆಗೆ ಪ್ರಸಕ್ತ ವರ್ಷದ ಜುಲೈ ತಿಂಗಳಿನಲ್ಲಿ ಇಸ್ರೋದಿಂದ ಚಂದ್ರಯಾನ-3 ಉಡಾವಣೆಯು ವಿಶ್ವಕ್ಕೆ ಭಾರತದ ಐತಿಹಾಸಿಕ ಮಾದರಿ ಕೊಡುಗೆಯಾಗಿದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಪೊಲೀಸ್ ಮಹಾ ನಿರೀಕ್ಷಕರಾದ ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಮೊಹಮ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read