ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಎರಡನೇ ಅತಿ ಸುಧೀರ್ಘ ಅವಧಿಗೆ ಪ್ರಧಾನಿಯಾದ ದೇಶದ ಎರಡನೇ ನಾಯಕ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.
ಸತತ 4077 ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಇಂದಿರಾಗಾಂಧಿಯವರ ದಾಖಲೆಯನ್ನು ಮೋದಿ ಮುರಿಯಲಿದ್ದಾರೆ. ಜವಾಹರಲಾಲ್ ನೆಹರು ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.
ಶುಕ್ರವಾರಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 4078 ದಿನಗಳಾಗಲಿದ್ದು, 4077 ದಿನ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿಯಲಿದ್ದಾರೆ. 1966ರ ಜನವರಿ 24 ರಿಂದ 1977ರ ಮಾರ್ಚ್ 24ರ ವರೆಗೆ ಇಂದಿರಾಗಾಂಧಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿದ್ದರು. ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಭಾರತದ ಪ್ರಧಾನಿ ಎನ್ನುವ ದಾಖಲೆ ನೆಹರು ಹೊಂದಿದ್ದಾರೆ.
ಎರಡನೇ ಸ್ಥಾನದಲ್ಲಿ ಇಂದಿರಾ ಗಾಂಧಿ ಅವರು ಇದ್ದರು. ಇದೀಗ ಆ ಸ್ಥಾನಕ್ಕೆ ಮೋದಿ ಬಂದಿದ್ದಾರೆ. ಸತತ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನೆಹರು ದಾಖಲೆಯನ್ನು ಈ ಹಿಂದೆ ಮೋದಿ ಹೊಂದಿದ್ದರು. ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ಪ್ರಧಾನಿ, ಎರಡು ಪೂರ್ಣ ಅವಧಿಗಳನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿ ಎಂಬ ದಾಖಲೆಯೂ ಮೋದಿಯವರದ್ದಾಗಿದೆ.