ರೇಬೀಸ್ ಅಥವಾ ಹುಚ್ಚುನಾಯಿ ರೋಗ ವೈರಾಣುವಿನಿಂದ ಬರುವ ಒಂದು ಮಾರಣಾಂತಿಕ ರೋಗವಾಗಿದ್ದು, ನಾಯಿ, ಬೆಕ್ಕು, ಇತರೆ ನಾಯಿ ಜಾತಿಗೆ ಸೇರಿದ ಪ್ರಾಣಿಗಳು ಹಾಗೂ ಜಾನುವಾರುಗಳಲ್ಲಿ ಮಾತ್ರವಲ್ಲದೆ ಮನುಷ್ಯರಲ್ಲೂ ಸಹಾ ರೇಬೀಸ್ ರೋಗವು ಕಂಡು ಬರುತ್ತದೆ.
ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ರೇಬೀಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು “ವಿಶ್ವ ರೇಬೀಸ್ ದಿನಾಚರಣೆ” ಆಚರಿಸಲಾಗುತ್ತದೆ. ಅದರಂತೆ. ಈ ವರ್ಷವೂ ಸಹ “ವಿಶ್ವ ರೇಬೀಸ್ ದಿನಾಚರಣೆ” ಯನ್ನು ಸೆ.28 ರಂದು ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಹಾಸನ ಜಿಲ್ಲೆಯಾದ್ಯಾಂತ ದಿನಾಂಕ 28.09.2025 ರಿಂದ 28.10.2025 ರವರೆಗೆ ಸುಮಾರು ಒಂದು ತಿಂಗಳ ಕಾಲ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಉಚಿತ ರೇಬೀಸ್ ರೋಗದ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಮನುಷ್ಯರಲ್ಲಿ ರೇಬೀಸ್ ರೋಗವು ಪ್ರಮುಖವಾಗಿ ರೇಬೀಸ್ ಪೀಡಿತ ನಾಯಿಗಳಿಂದ ಮತ್ತು ರೇಬೀಸ್ ಪೀಡಿತ ಬೆಕ್ಕುಗಳು ಕಚ್ಚುವುದರಿಂದ ಅಥವಾ ಪರಚುವುದರಿಂದ ಬರುತ್ತದೆ. ಒಮ್ಮೆ ರೋಗ ಬಂದರೆ, ಮನುಷ್ಯರಿಗಾಗಲೀ ಅಥವಾ ಪ್ರಾಣಿಗಳಿಗಾಗಲೀ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿರುವುದಿಲ್ಲ ಹಾಗೂ ಖಾಯಿಲೆಯು ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ಆದ್ದರಿಂದ ಲಸಿಕೆಯೊಂದೇ ರೇಬೀಸ್ ತಡೆಗಟ್ಟುವ ಏಕೈಕ ಮಾರ್ಗವಾಗಿದೆ. ಶೇಕಡ 99ಕ್ಕೂ ಹೆಚ್ಚು ಮಾನವರ ರೇಬೀಸ್ ಪ್ರಕರಣಗಳು ರೇಬೀಸ್ ಪೀಡಿತ ನಾಯಿ/ ಬೆಕ್ಕುಗಳು ಕಚ್ಚುವುದರಿಂದ/ ಪರಚುವುದರಿಂದ ಅಥವಾ ಅವುಗಳ ನಿಕಟ ಸಂಪರ್ಕದಿAದ ಬರುತ್ತದೆ, ಆದ್ದರಿಂದ ನಾಯಿ/ ಬೆಕ್ಕುಗಳಲ್ಲಿ ರೇಬೀಸ್ ರೋಗ ಬಾರದಂತೆ ಲಸಿಕೆ ಹಾಕಿಸಿ ಕೊಳ್ಳುವುದು ರೇಬೀಸ್ ತಡೆಗಟ್ಟುವಲ್ಲಿ ಪ್ರಮುಖ ಘಟ್ಟವಾಗಿದೆ.
ನಾಯಿಗಳ ಸಂಖ್ಯೆ ಹೆಚ್ಚು ಇರುವ ಗ್ರಾಮ, ಪಟ್ಟಣ, ನಗರಗಳಲ್ಲಿ ಉಚಿತ ಲಸಿಕಾ ಶಿಬಿರಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಸಾಕು ಪ್ರಾಣಿ ಮಾಲೀಕರು ತಮ್ಮ ನಾಯಿ ಮತ್ತು ಬೆಕ್ಕುಗಳಿಗೆ ರೇಬೀಸ್ ರೋಗದ ಲಸಿಕೆ ಹಾಕಿಸಿಕೊಂಡು ಮನುಷ್ಯರು ಹಾಗೂ ಪ್ರಾಣಿಗಳನ್ನು ಕಾಡುವ ಮಾರಣಾಂತಿಕ ಖಾಯಿಲೆಯಾದ ರೇಬೀಸ್ ರೋಗ ತಡೆಗಟ್ಟಲು ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಿದೆ.
ಈ ವರ್ಷದ “ವಿಶ್ವ ರೇಬೀಸ್ ದಿನಾಚಾರಣೆ”ಯ ಘೋಷವಾಕ್ಯವು “ನಾವು, ನೀವು ಮತ್ತು ಸಮುದಾಯ” ಎಂದಿದ್ದು, ಅದರಂತೆ ನಾವು, ನೀವು ಮತ್ತು ಸಮುದಾಯದವರೆಲ್ಲರೂ ಕೈ ಜೋಡಿಸಿ ರೇಬೀಸ್ ರೋಗ ತಡೆಗಟ್ಟಲು ಸಹಕರಿಸೋಣ ಎಂದು ಹಾಸನ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.