ಇಂದು ರಾಜ್ಯಾದ್ಯಂತ ‘ಆಟಿ ಅಮಾವಾಸ್ಯೆ’ ಹಬ್ಬ.! ಕಷಾಯ ಕುಡಿಯುವ ಗುಟ್ಟು, ಮಹತ್ವವೇನು ತಿಳಿಯಿರಿ |Ati Amavasya

ದುನಿಯಾ ಸ್ಪೆಷಲ್ ಡೆಸ್ಕ್ : ಇಂದು ರಾಜ್ಯಾದ್ಯಂತ ‘ಆಟಿ ಅಮಾವಾಸ್ಯೆ’ ಹಬ್ಬದ ಸಂಭ್ರಮ. ಈ ಹಬ್ಬದಲ್ಲಿ ಕಷಾಯ ಕುಡಿಯುವುದು ಆಚರಣೆಯ ಮಹತ್ವದ ಭಾಗವಾಗಿದೆ. ಮಲೆನಾಡು ಹಾಗೂ ತುಳು ನಾಡಿನಲ್ಲಿ ಆಟಿ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳು, ಪೂಜಾ ಕಾರ್ಯಗಳಿಗೆ ನಿಷಿದ್ಧಹೇರಲಾಗುತ್ತದೆ.

ಈ ಅಮಾವಾಸ್ಯೆಯನ್ನು ಆಷಾಡ ಅಮಾವಾಸೆ, ದೀವಿಗೆ ಕರ್ನಾಟಕ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ತಿಂಗಳಲ್ಲಿ ಬರುವ ಈ ಅಮಾವಸ್ಯೆಯು ತುಳುವ ಜನರಿಗೆ ವಿಶೇಷವಾದ ದಿನ ಹಾಗೂ ಇದು ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಆಚರಣೆಯಾಗಿದೆ. ಈ ದಿನದಂದು ತುಳುನಾಡು ಜನರು ‘ಪಾಲೆ ಮರ’ದ/’ಸಪ್ತಪರ್ಣಿ’ಮರದ ತೊಗಟೆಯನ್ನು ಕೆತ್ತಿ ಅದರಿಂದ ಕಷಾಯ/ಮದ್ದನ್ನು ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ತುಳುನಾಡಿನಲ್ಲಿ ಆಟಿ ಎಂಬುದು ಒಂದು ತಿಂಗಳಿನ ಹೆಸರಾಗಿದೆ. ಆಟಿ ತಿಂಗಳನ್ನು ಅನಿಷ್ಟ ತಿಂಗಳೆಂದೂ ಕರೆಯುತ್ತಾರೆ. ಏಕೆಂದರೆ, ಆಟಿ ತಿಂಗಳಲ್ಲಿ ಕ್ರಿಮಿಕೀಟಗಳ ತೊಂದರೆ ಅಧಿಕವಾಗಿರುವುದರ ಜೊತೆಗೆ ಅಧಿಕವಾದ ಮಳೆಯೂ ಇರುತ್ತದೆ.

ಇನ್ನೂ, ಆಟಿ ಅಮಾವಾಸ್ಯೆಯ ವಿಶೇಷ ಅಂದರೆ ಈ ಹಬ್ಬದಂದು ಖಾಲಿಹೊಟ್ಟೆಯಲ್ಲಿ ಜನರು ಪಾಲೆ ಮರದ ಕಷಾಯ ಸೇವಿಸುತ್ತಾರೆ. ಪಾಲೆ ಮರವು ಒಂದು ರೀತಿಯಲ್ಲಿ ಹಾಲಿನ ರೂಪದಲ್ಲಿ ರಸ ಕೊಡುವ ಮರವಾಗಿದೆ. ಇದರಿಂದ ತಯಾರಿಸಯವ ಕಹಿಯಾದ ಖಷಾಯವನ್ನು ಸೇವಿಸುತ್ತಾರೆ.

ಪಾಲೆ ಮರದ ತೊಗಟೆಯನ್ನು ತೆಗೆಯುವ ವಿಧಾನ
ಮನೆಯ ಯಜಮಾನ ಅಮಾವಾಸ್ಯೆಯ ಹಿಂದಿನ ದಿನ ಕಾಡಿಗೆ ಹೋಗಿ ಸಪ್ತಪರ್ಣಿ/ಪಾಲೆ ಮರವನ್ನು ಹುಡುಕಿ ತೆಗೆದು ಮರಕ್ಕೆ ಏನಾದರೂ ಗುರುತನ್ನು ನೀಡಿ ಬರುತ್ತಾನೆ(ಒಣ ಬಾಳೆ ಎಲೆಗಳನ್ನು ಹಗ್ಗದಿಂದ ಕಟ್ಟಿ ಮರದ ಕೆಳಗೆ ಕಲ್ಲು ಇಡುತ್ತಾರೆ). ಮರುದಿನ ಅಂದರೆ ಆಟಿ ಅಮಾವಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಪಾಲೆಮರದ ಬುಡಕ್ಕೆ ತೆರಳಿ ಕೈಯಲ್ಲೊಂದು ಪೊರಕೆ ಹಿಡಿದು ಮರಕ್ಕೆ ಸುತ್ತು ಬಂದು ಅದರಿಂದ ಮರಕ್ಕೆ ಮೂರು ಪೆಟ್ಟು ಕೊಡುತ್ತಾನೆ.ನಂತರ ಮರದ ಕೆತ್ತೆ(ತೊಗಟೆ)ಯನ್ನು ಕಲ್ಲಿನಿಂದ ಗುದ್ದಿ ತೆಗೆಯಬೇಕು. ಹಾಗೆ ಕಲ್ಲಿನಿಂದ ಗುದ್ದುವಾಗ ಪಾಲೆಮರವು ಬಿಳಿಯ ಹಾಲನ್ನು ಬಿಡುತ್ತದೆ. ಇದರಿಂದ ತೊಗಟೆ ತೆಗೆಯುವವನ ಮೈ ಹಾಗೂ ಬಟ್ಟೆ ಮರದ ಹಾಲಿನಿಂದ ಹಾಳಾಗುತ್ತದೆ. ಹಿಂದಿನಿಂದ ಬಂದ ವಾಡಿಕೆಯ ಪ್ರಕಾರ ಈ ಮರದ ತೊಗಟೆಯನ್ನು ಬಟ್ಟೆ ಧರಿಸದೆ ಬರಿ ಮೈಯಲ್ಲಿ ತೆಗೆಯಬೇಕು. ಮರವನ್ನು ಹೀಗೆ ಕಲ್ಲಿನಲ್ಲಿ ಗುದ್ದುವಾಗ ಅದರ ಚರ್ಮವು ಬಿಡಿಬಿಡಿಯಾಗಿ(ತುಳುವಿನಲ್ಲಿ ಪಾಲೆ ಪಾಲೆಯಾಗಿ) ಏಳುವುದರಿಂದ ಈ ಮರಕ್ಕೆ ತುಳು ಭಾಷೆಯಲ್ಲಿ ಪಾಲೆ ಮರ ಎಂಬ ಹೆಸರು ಬಂತು.

ಪಾಲೆ ಮರದ ಕಷಾಯ ಕುಡಿಯುವ ಗುಟ್ಟೇನು..?

ಸಪ್ತಪರ್ಣಿ ಮರ ಎಂದು ಕರೆಯುವ ಈ ಮರದ ತೊಗಟೆಯಿಂದ ಮಾಡುವ ಕಷಾಯ ಸರ್ವರೋಗಗಳಿಗೆ ರಾಮಭಾಣ ಎಂದು ಹಿರಿಯರು ಹೇಳಿದ್ದಾರೆ. ಹಿಂದಿನ ಕಾಲದಿಂದಲೂ ಆಟಿ ಅಮಾವಾಸ್ಯೆ ದಿನದಂದು ಈ ಮರದ ಕಷಾಯ ಸೇವಿಸುವ ಪದ್ದತಿ ಬೆಳೆದುಕೊಂಡು ಬಂದಿದೆ. ಈ ಸಮಯದಲ್ಲಿ ರೋಗ ಬಾಧಿಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಆಟಿ ಅಮಾವಾಸ್ಯೆಯ ದಿನ ಹಾಳೆ ಮರದ ತೊಗಟೆಯ ತುಂಬಾ ಸಕಲ ರೋಗಕ್ಕೂ ರಾಮಬಾಣವಾಗಬಲ್ಲ ಆಯುರ್ವೇಧದ ಶಕ್ತಿಯನ್ನು ಮೈಗೂಡಿಸಿ ಕೊಂಡಿರುತ್ತದೆಯಂತೆ. ಒಂದು ವರ್ಷಗಳ ಕಾಲ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಮತೋಲನದಲ್ಲಿ ಇಡುವ ಶಕ್ತಿ ಈ ಕಷಾಯಕ್ಕೆ ಇದೆಯಂತೆಈ ಕಷಾಯ ತುಂಬಾ ಕಹಿ ಇರುವುದರಿಂದ, ಇದನ್ನು ಕುಡಿದ ಬಳಿಕ ಸ್ವಲ್ಪ ಬೆಲ್ಲ ಸೇವಿಸುತ್ತಾರೆ. ಈ ಕಷಾಯ ದೇಹಕ್ಕೆ ತುಂಬಾ ಉಷ್ಣವಾದ್ದರಿಂದ, ನಂತರ ಮೆಂತ್ಯೆ ಗಂಜಿ ಸೇವಿಸುವುದು ವಾಡಿಕೆಯಾಗಿದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ಕಲ್ಲಿನಿಂದ ಪಾಲೆ ಮರದ ಕೆತ್ತೆಯನ್ನು ಕೆತ್ತಿ ತಂದು ಕಷಾಯ ಮಾಡಿ ಕುಡಿಯುವುದು ಅನಾದಿ ಕಾಲದಿಂದಲೂ ನಡೆದು ಬಂದ ಆಚರಣೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read