ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಸಾಕ್ಷಿದಾರ ಗುರುತಿಸಿದ 13ನೇ ಪಾಯಿಂಟ್ ನಲ್ಲಿ ಸೋಮವಾರ ದೆಹಲಿಯಿಂದ ಆಗಮಿಸಿದ ಡ್ರೋನ್ ಮೌಂಟೆಡ್ ಜಿಪಿಆರ್(ಗ್ರೌಂಡ್ ಪೇನೇಟ್ರೇಡೆಡ್ ರಾಡಾರ್) ಮೂಲಕ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ.
ಕ್ಲಿಷ್ಟಕರವಾಗಿರುವ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆಯನ್ನು ಕೆಲವು ದಿನಗಳಿಂದ ಮುಂದೂಡಲಾಗಿತ್ತು. ಮಂಗಳವಾರ ಅಧಿಕೃತವಾಗಿ ಶೋಧ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ .ನೇತ್ರಾವತಿ ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಸಮೀಪ 13ನೇ ಪಾಯಿಂಟ್ ನಲ್ಲಿ ಸೋಮವಾರ ಮಧ್ಯಾಹ್ನ ಜಿಪಿಆರ್ ಹಾರಾಟ ನಡೆಸಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿದೆ.
ನಂತರ ಪೌರಕಾರ್ಮಿಕರು ಸುಮಾರು 60 ಅಡಿ ಉದ್ದ 30 ಅಡಿ ಅಗಲದ ಈ ಜಾಗದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿದ್ದಾರೆ. ಸ್ಥಳ ಸ್ವಚ್ಛತೆ ಮಾಡಿರುವುದರಿಂದ ಮಂಗಳವಾರ ಅಧಿಕೃತ ಕಾರ್ಯಾಚರಣೆ ಮುಂದುವರೆಯುವ ಸೂಚನೆ ಸಿಕ್ಕಿದೆ. ಜಿಪಿಆರ್ ಯಂತ್ರದ ಮೂಲಕ ಧರ್ಮಸ್ಥಳದ ಭೂಗರ್ಭ ರಹಸ್ಯ ಬಯಲಾಗುವ ಕುತೂಹಲದಿಂದ ಎಲ್ಲರ ಚಿತ್ತ 13ನೇ ಪಾಯಿಂಟ್ ನತ್ತ ನೆಟ್ಟಿದೆ.