ಗದಗ: ಕಾಂಗ್ರೆಸ್ ನಲ್ಲಿ ಸಚಿವರಾಗಲು ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಡಬೇಕು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಬಿ. ಶ್ರೀರಾಮುಲು ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಯಾರು ಕಪ್ಪ ಕಾಣಿಕೆ ಕೊಡುವುದಿಲ್ಲವೋ ಅವರು ಮಂತ್ರಿ ಆಗಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಮಂತ್ರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಹಣ ಕೊಟ್ಟರೆ ಮಾತ್ರ ಮಂತ್ರಿಗಳಾಗಿ ಮುಂದುವರೆಯುತ್ತೀರಿ ಎಂದು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸಚಿವರಿಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೈಕಮಾಂಡ್ ಗೆ ಮಂತ್ರಿಗಳು ಹಣ ಕೊಡಲು ಆಗದೆ ಹೋದರೆ ನೇರವಾಗಿ ಗೇಟ್ ಪಾಸ್ ಕೊಟ್ಟು ಸಚಿವ ಸ್ಥಾನದಿಂದ ತೆಗೆಯುತ್ತಿದ್ದಾರೆ. ಉದಾಹರಣೆಗೆ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಪರಿಸ್ಥಿತಿ ಏನಾಗಿದೆ? ಕೆ.ಎನ್. ರಾಜಣ್ಣನವರು ಸಂಪುಟದಲ್ಲಿ ಹಿರಿಯ ನಾಯಕರಿದ್ದರು. ಅವರನ್ನು ಸಂಪುಟದಿಂದ ಕಿತ್ತು ಹಾಕಿದರೂ ಅದರ ಬಗ್ಗೆ ಯಾರೂ ಸ್ಪಷ್ಟೀಕರಣ ಕೊಟ್ಟಿಲ್ಲ. ಯಾವುದೇ ಸ್ಪಷ್ಟೀಕರಣ ಕೊಡದೆ ಮಂತ್ರಿ ಸ್ಥಾನದಿಂದ ತೆಗೆದು ಹಾಕಿದರು ಎಂದು ದೂರಿದ್ದಾರೆ.
ಸಚಿವರಿಗೆ ಎಲ್ಐಸಿ ಏಜೆಂಟ್ ಗಳಿಗೆ ಕೊಟ್ಟ ರೀತಿಯಲ್ಲಿ ಟಾರ್ಗೆಟ್ ಕೊಟ್ಟಿದ್ದಾರೆ. ಇಷ್ಟು ಕಲೆಕ್ಷನ್ ಮಾಡಬೇಕೆಂದು ಟಾರ್ಗೆಟ್ ಕೊಡುವ ಕೆಲಸವಾಗುತ್ತಿದೆ. ಟಾರ್ಗೆಟ್ ರೀಚ್ ಮಾಡಿದರೆ ಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತೀರಿ. ಇಲ್ಲದಿದ್ದರೆ ಇಲ್ಲವೆಂದು ಸಚಿವರಿಗೆ ಹೇಳಿದ್ದಾರೆ. ಟಾರ್ಗೆಟ್ ಕೊಟ್ಟು ಕೆಲಸ ಮಾಡುವ ಪರಿಸ್ಥಿತಿಗೆ ಸರ್ಕಾರ ಬಂದು ನಿಂತಿದೆ ಎಂದು ಗದಗದಲ್ಲಿ ಮಾಜಿ ಸಚಿವ ಬಿ. ಶ್ರೀರಾಮಲು ಹೇಳಿದ್ದಾರೆ.
