ಬೆಳಗಾವಿ: ಸಾವು ಯಾವಾಗ..? ಹೇಗೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ಬೆಳಗಾವಿಯ ಅಮನ್ ನಗರದಲ್ಲಿ ದಾರುಣ ಘಟನೆ ನಡೆದಿದ್ದು, ಹಾಯಾಗಿ ನಿದ್ದೆ ಮಾಡಬೇಕು ಎಂದವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಏನಿದು ಘಟನೆ..?
ನಾಲ್ವರು ಯುವಕರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಮ್ಮ ರೂಮ್‌ಗೆ ಮಲಗಲು ಬಂದಿದ್ದರು. ಆದರೆ ಭಾರಿ ಚಳಿ ಇರುವ ಕಾರಣ ರೂಮ್ ಬಾಗಿಲು, ಕಿಟಕಿಗಳನ್ನೆಲ್ಲ ಮುಚ್ಚಿಕೊಂಡಿದ್ದರು. ಅಲ್ಲದೇ ರೂಮ್‌ನಲ್ಲಿ ಬೆಂಕಿ ಹಾಕಿಕೊಂಡಿದ್ದರು. ಬೆಂಕಿಗೆ ಇದ್ದಿಲು ಹಾಕಿದ್ದರು. ಸೊಳ್ಳೆ ಕಾಟ ಅಂತ ಮಸ್ಕಿಟೋ ಕಾಯ್ಲ್ ಕೂಡ ಹಚ್ಚಿದ್ದರು. ಆದರೆ ಕೆಲವೇ ಹೊತ್ತಲ್ಲಿ, ರೂಮ್ ತುಂಬ ಹೊಗೆ ತುಂಬಿದೆ. ಏನು ಆಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲೇ ಉಸಿರುಗಟ್ಟಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಮೃತರನ್ನ ರಿಹಾನ್ ಮತ್ತೆ( 22), ಮೋಹಿನ್ ನಾಲಬಂದ(23), ಸರ್ಫರಾಜ್ ಹರಪ್ಪನಹಳ್ಳಿ,(22) ಎಂದು ಗುರುತಿಸಲಾಗಿದೆ.ಮತ್ತೋರ್ವ ಯುವಕ ಶಾಹನಾವಾಜ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಬೆಳಗಾವಿ ನಗರದ ನಿವಾಸಿಗಳು ಆಗಿದ್ದಾರೆ. ಯುವಕರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಪೊಲೀಸರು ತನಿಖೆ ನಡೆಯುತ್ತಿದ್ದಾರೆ.
