ಯಾದಗಿರಿ: ಬಾಲಕಿಯೊಬ್ಬಳು ಜನ್ಮ ನೀಡಿದ್ದ ಗಂಡು ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆ ವಾಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸ್ಟಾಪ್ ನರ್ಸ್ ಭಾನುಮತಿ, ದತ್ತು ಪಡೆದ ದಂಪತಿಯಾದ ಮಹಮ್ಮದ್ ಆರಿಫ್ ಅಹಮದ್, ಅಪ್ಸನ್ ನಿಖತ್ ಬಂಧಿತರು. ಮಗುವಿನ ತಾಯಿ ಕೂಡ ಆರೋಪಿಯಾಗಿದ್ದು, ಇನ್ನೂ ಬಂಧಿಸಿಲ್ಲ.
ಮೂಲತಃ ಕಲಬುರಗಿ ಜಿಲ್ಲೆ ರಾವೂರು ಗ್ರಾಮದ ಬಾಲಕಿ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಸ್ಟಾಫ್ ನರ್ಸ್ ಭಾನುಮತಿ ಮಗುವನ್ನು ಮಹಮ್ಮದ್ ಆರಿಫ್ ಅಹಮದ್ ದಂಪತಿಗೆ ಕಾನೂನುಬಾಹಿರವಾಗಿ ದತ್ತು ಕೊಡಿಸಿದ್ದರು.
ಫೆಬ್ರವರಿ 9ರಂದು ಮಗುವಿಗೆ ಅನಾರೋಗ್ಯ ಕಾರಣ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರಿಗೆ ಮಗುವಿನ ಬಗ್ಗೆ ಅನುಮಾನ ಬಂದ ಹಿನ್ನೆಲೆ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಸಹಾಯವಾಣಿಯವರು ಮಗುವನ್ನು ದತ್ತು ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ವಿಚಾರಣೆಗೆ ಒಳಪಡಿಸಿದಾಗ ಅಕ್ರಮವಾಗಿ ದತ್ತು ಪ್ರಕ್ರಿಯೆ ನಡೆದಿರುವುದು ಗೊತ್ತಾಗಿದೆ. ಮಾರ್ಚ್ 27 ರಂದು ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.