ಬಾಲಿವುಡ್‌ನ ಗ್ಲಾಮರ್ ಜಗತ್ತಿನಲ್ಲಿ ಮಿಂಚಲು ಬರುವ ಅನೇಕ ನಟರಲ್ಲಿ ಕೆಲವರು ಯಶಸ್ಸಿನ ಉತ್ತುಂಗಕ್ಕೇರಿದರೆ, ಇನ್ನು ಕೆಲವರು ಬೆಳಕಿಗೆ ಬಾರದೆ ಮರೆಯಾಗುತ್ತಾರೆ. 2010ರ ದಶಕದಲ್ಲಿ ರಣವೀರ್ ಸಿಂಗ್‌ನಿಂದ ಹಿಡಿದು ಸಿದ್ಧಾರ್ಥ್ ಮಲ್ಹೋತ್ರವರೆಗೆ ಅನೇಕ ಹೊಸ ಪ್ರತಿಭೆಗಳು ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅವರಲ್ಲಿ ಹೆಚ್ಚಿನವರು ಜನಪ್ರಿಯ ತಾರೆಯರಾದರು. ಆದರೆ, ಕೆಲವರು ಮಾತ್ರ ಹಿನ್ನಡೆ ಅನುಭವಿಸಿದರು.
ಅಂತಹ ನಟರಲ್ಲಿ ಗಿರೀಶ್ ಕುಮಾರ್ ಒಬ್ಬರು. 2013ರಲ್ಲಿ ಪ್ರಭುದೇವ ನಿರ್ದೇಶನದ ‘ರಾಮಯ್ಯ ವಸ್ತಾವಯ್ಯ’ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಶ್ರುತಿ ಹಾಸನ್ ಕೂಡ ನಟಿಸಿದ್ದ ಈ ಸಿನಿಮಾ, ತೆಲುಗಿನ ‘ನುವ್ವೊಸ್ತಾನಂಟೆ ನಾನೊದ್ದಂಟಾನ’ ಚಿತ್ರದ ರಿಮೇಕ್ ಆಗಿತ್ತು. ಬರೋಬ್ಬರಿ 38 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದರೂ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಲಿಲ್ಲ. ಆದರೂ, ಗಿರೀಶ್ ಅಭಿನಯಕ್ಕೆ ಕೆಲ ಪ್ರಶಸ್ತಿ ಸಮಾರಂಭಗಳಲ್ಲಿ ನಾಮಿನೇಷನ್‌ಗಳು ಲಭಿಸಿದವು.
ಇದಾದ ನಂತರ, 2016ರಲ್ಲಿ ಗಿರೀಶ್ ‘ಲವ್‌ಶುದ್ಧ’ ಎಂಬ ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಿದರು. ನವನೀತ್ ಕೌರ್ ಧಿಲ್ಲೋನ್ ಅವರೊಂದಿಗೆ ತೆರೆ ಹಂಚಿಕೊಂಡ ಈ ಚಿತ್ರವೂ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲಿಲ್ಲ. ಈ ಸಿನಿಮಾ ಸೋತ ನಂತರ ಗಿರೀಶ್ ಚಿತ್ರರಂಗಕ್ಕೆ ವಿದಾಯ ಹೇಳಿದರು.
ಆಶ್ಚರ್ಯವೆಂದರೆ, ಗಿರೀಶ್ ಕುಮಾರ್ ಅವರು ನಿರ್ಮಾಪಕ ಕುಮಾರ್ ಎಸ್. ತೌರಾನಿ ಅವರ ಪುತ್ರ ಮತ್ತು ರಮೇಶ್ ಎಸ್. ತೌರಾನಿ ಅವರ ಸೋದರಳಿಯ. ಚಿತ್ರರಂಗದ ಹಿನ್ನೆಲೆ ಮತ್ತು ತಂದೆಯ ಬೆಂಬಲವಿದ್ದರೂ, ಗಿರೀಶ್ ಬಾಲಿವುಡ್‌ನಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.
ನಟನೆಯನ್ನು ತೊರೆದ ನಂತರ ಗಿರೀಶ್ ತಮ್ಮ ಕುಟುಂಬದ ವ್ಯವಹಾರವಾದ ಟಿಪ್ಸ್ ಇಂಡಸ್ಟ್ರೀಸ್‌ನಲ್ಲಿ ತಮ್ಮ ತಂದೆ ಮತ್ತು ಚಿಕ್ಕಪ್ಪನಿಗೆ ಸಹಾಯ ಮಾಡಲು ಸೇರಿಕೊಂಡರು. ವರದಿಗಳ ಪ್ರಕಾರ, ಅವರು ಪ್ರಸ್ತುತ ಟಿಪ್ಸ್ ಸಾಮ್ರಾಜ್ಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿಪ್ಸ್ ಇಂಡಸ್ಟ್ರೀಸ್ ಭಾರತದ ಪ್ರಮುಖ ಮನರಂಜನಾ ಸಂಸ್ಥೆಗಳಲ್ಲಿ ಒಂದಾಗಿದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಟಿಪ್ಸ್‌ನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 10,517 ಕೋಟಿ ರೂಪಾಯಿಗಳು!
ಕುಟುಂಬದ ವ್ಯವಹಾರದಲ್ಲಿ ಗಿರೀಶ್ ಅವರಿಗೂ ಪಾಲುದಾರಿಕೆ ಇದ್ದು, ಇದು ಅವರನ್ನು ಅವರ ಅನೇಕ ಸಮಕಾಲೀನ ಮತ್ತು ಹಿರಿಯ ನಟರಿಗಿಂತ ಶ್ರೀಮಂತರನ್ನಾಗಿಸಿದೆ. ಟ್ರೆಂಡ್ ಲೈನ್‌ನ ವರದಿಯ ಪ್ರಕಾರ, ಗಿರೀಶ್ ಅವರ ವೈಯಕ್ತಿಕ ಆಸ್ತಿ ಅಂದಾಜು 2164 ಕೋಟಿ ರೂಪಾಯಿ. ಟಿಪ್ಸ್‌ನ ಪ್ರವರ್ತಕ ಮತ್ತು ಕಾರ್ಯನಿರ್ವಾಹಕರಾಗಿ, ಅವರು ‘ಪೊನ್ನಿಯಿನ್ ಸೆಲ್ವನ್’ ಸರಣಿ, ಶ್ರೀರಾಮ್ ರಾಘವನ್ ಅವರ ಥ್ರಿಲ್ಲರ್ ‘ಮೆರಿ ಕ್ರಿಸ್ಮಸ್’ ಸೇರಿದಂತೆ ಅನೇಕ ದೊಡ್ಡ ಸಿನಿಮಾಗಳ ವಿತರಣೆಯಲ್ಲೂ ಸಕ್ರಿಯರಾಗಿದ್ದಾರೆ. ಗಿರೀಶ್ ಪ್ರಸ್ತುತ ತಮ್ಮ ಪತ್ನಿ ಕೃಷ್ಣಾ ಮತ್ತು ಮಗುವಿನೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.