ಬೆಂಗಳೂರು: ಖಾಸಗಿ ಬಡಾವಣೆಗಳಿಗೆ ಸರ್ಕಾರದಿಂದ ನೀರು, ವಿದ್ಯುತ್, ಒಳ ಚರಂಡಿ ವ್ಯವಸ್ಥೆ ಕಲ್ಪಿಸುವುದಿಲ್ಲ. ಆದರೆ ಈ ಬಡಾವಣೆಗಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟರೆ ಮಾತ್ರ ಅಗತ್ಯ ಹಣ ಪಡೆದುಕೊಂಡು ನಿರ್ವಹಣೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಮೂಲಸೌಕರ್ಯ ಕಲ್ಪಿಸುವುದು ಖಾಸಗಿ ಬಡಾವಣೆ ನಿರ್ಮಾಣ ಮಾಡುವವರ ಜವಾಬ್ದಾರಿಯಾಗಿರುತ್ತದೆ. ಸರ್ಕಾರಕ್ಕೆ ಅಗತ್ಯ ಹಣ ನೀಡಿದರೆ ನೀರು, ವಿದ್ಯುತ್ ಪೂರೈಸಲಾಗುವುದು. ಅದೇ ರೀತಿ ಖಾಸಗಿ ಬಡಾವಣೆಗಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಟ್ಟರೆ ಮೂಲ ಸೌಲಭ್ಯಗಳ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೇವಲ ತೆರಿಗೆ ಕಾರಣಕ್ಕೆ ಬಿ ಖಾತಾ ನೀಡಲಾಗುತ್ತಿದೆ. ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಆದರೆ ಈಗ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಬಿ ಖಾತಾಗಳಿಗೂ ಎ ಖಾತಾ ನೀಡಲು ಮುಂದಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.