ಕೈಗೂಡದ ಹನಿಟ್ರ‍್ಯಾಪ್ ಯತ್ನ, 58 ವರ್ಷದ ವ್ಯಕ್ತಿಯನ್ನು ಕೊಂದು ದೇಹ ಬಿಸಾಡಿದ ಯುವತಿ ಅರೆಸ್ಟ್

ತನ್ನ ಹನಿಟ್ರ‍್ಯಾಪ್ ಯತ್ನಕ್ಕೆ ಬೀಳದ 58 ವರ್ಷದ ಹಿರಿಯ ಸಹೋದ್ಯೋಗಿಯೊಬ್ಬರನ್ನು 19 ವರ್ಷ ವಯಸ್ಸಿನ ಯುವತಿ ಮತ್ತವಳ ಸಹಚರರು ಕೊಂದು ದೇಹವನ್ನು ತುಂಡು ತುಂಡಾಗಿ ಕಣಿವೆಯೊಂದಕ್ಕೆ ಎಸೆದಿದ್ದಾರೆ. ಇಬ್ಬರೂ ಆಪಾದಿತರನ್ನು ಪೊಲೀಸರು ಬಂಧಿಸಿದ್ದಾರೆ.

‌ಕೇರಳದ ಮಲಪ್ಪುರಂನ ತಿರೂರು ಎಂಬ ಊರಿನ ನಿವಾಸಿ ಮೆಚೆರಿ ಸಿದ್ಧಿಕಿ ಮೇ 18ರಿಂದಲೂ ತಮ್ಮ ರೆಸ್ಟೋರೆಂಟ್‌ನಿಂದ ಕಾಣೆಯಾಗಿದ್ದರು. ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಘಾಟ್ ರಸ್ತೆ ಬಳಿಯ ಕಣಿವೆಯೊಂದರಲ್ಲಿ ಪೊಲೀಸರು ಸಿದ್ಧಿಕಿಯ ದೇಹದ ಭಾಗಗಳನ್ನು ಪತ್ತೆ ಮಾಡಿದ್ದರು.

ಘಟನೆ ಸಂಬಂಧ ಪಾಲಕ್ಕಾಡ್ ಜಿಲ್ಲೆಯ ನಿವಾಸಿಗಳಾದ ಮುಹಮ್ಮದ್ ಶಿಬಿಲಿ (22), ಖದೀಜಾತ್‌ ಫಾತಿಮಾ ಹಾಗೂ ಆಶಿಕ್ ಅಲಿಯಾಸ್ ಚಿಕ್ಕು (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಎಗ್ಮೋರ್‌ ರೈಲ್ವೇ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಿದ್ದು, ಆಶಿಕ್‌ನನ್ನು ಪಾಲಕ್ಕಾಡ್‌ನಲ್ಲಿ ಬಂಧಿಸಲಾಗಿದೆ.

ಬ್ಲಾಕ್‌ಮೇಲ್ ಯತ್ನವೊಂದಕ್ಕೆ ಬಗ್ಗದ ರೆಸ್ಟೋರೆಂಟ್ ಮಾಲೀಕನನ್ನು ಲಾಡ್ಜ್ ಕೋಣೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಮಲಪ್ಪುರಂ ಎಸ್‌ಪಿ ಸುಜಿತ್‌ ದಾಸ್ ತಿಳಿಸಿದ್ದಾರೆ.

“ಮೂವರು ಆಪಾದಿತರು ಕೊಲೆಯಾದ ವ್ಯಕ್ತಿ ಮೇಲೆ ಹನಿಟ್ರ‍್ಯಾಪ್ ಜಾಲ ಬೀಸಿದ್ದರು. ಸಿದ್ಧಿಕಿಯ ಬೆತ್ತಲೆ ಚಿತ್ರಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಹಣದ ಬೇಡಿಕೆಯನ್ನು ತಿರಸ್ಕರಿಸಿದ ಸಿದ್ಧಿಕಿ ಈ ಮೂವರೊಂದಿಗೆ ತಿಕ್ಕಾಟದಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಸಿದ್ಧಿಕಿಯ ತಲೆಗೆ ಶಿಬಿಲಿ ಸುತ್ತಿಗೆ ತೆಗೆದುಕೊಂಡು ಬಾರಿಸಿದ್ದಾನೆ. ಈ ಸುತ್ತಿಗೆಯನ್ನು ಫರ್ಹಾನಾ ಬ್ಯಾಗ್‌ನಲ್ಲಿ ತಂದಿದ್ದಳು. ಸಿದ್ಧಿಕಿಯ ಎದೆಗೆ ಆಶಿಕಿ ಒದ್ದ ಪರಿಣಾಮ ಅವರ ಶ್ವಾಸಕೋಶಗಳು ಹಾನಿಯಾಗಿ ಎದೆಗೂಡಿನ ಮೂಳೆಗಳು ಮುರಿದಿವೆ. ಸತತ ಹಲ್ಲೆಯ ಪರಿಣಾಮ ಸಿದ್ಧಿಕಿ ಜೀವ ಹೋಗಿದೆ,” ಎಂದು ಎಸ್ಪಿ ತಿಳಿಸಿದ್ದಾರೆ.

ಸಿದ್ಧಿಕಿ ಹಾಗೂ ಫರ್ಹಾನಾಳ ತಂದೆ ಸ್ನೇಹಿತರಾಗಿದ್ದು, ಆಕೆಯ ವಿನಂತಿಯ ಮೇರೆಗೆ ತಮ್ಮ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಶಿಬಿಲಿಯನ್ನು ಸಿದ್ಧಿಕಿ ನೇಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಶಿಕ್, ಫರ್ಹಾನಾಳ ಸ್ನೇಹಿತನಾಗಿದ್ದಾನೆ.

ಕೆಲ ವರ್ಷಗಳ ಹಿಂದೆ ಶಿಬಿಲಿ ವಿರುದ್ಧ ಫರ್ಹಾನಾ ಲೈಂಗಿಕ ಕಿರುಕುಳದ ದೂರು ಕೊಟ್ಟಿದ್ದಳು. ಆದರೆ ಈ ಪ್ರಕರಣ ರಾಜಿಯೊಂದಿಗೆ ಅಂತ್ಯವಾಗಿತ್ತು. ಇದಾದ ಬಳಿಕ ಸಿದ್ಧಿಕಿಯನ್ನು ಹನಿಟ್ರ‍್ಯಾಪ್‌ಗೆ ಬೀಳಿಸಲು ಶಿಬಿಲಿ ಹೊಂಚು ಹಾಕಿ ಅದಕ್ಕೆ ಫರ್ಹಾನಾಳನ್ನು ಪಾಲುದಾರಳನ್ನಾಗಿ ಮಾಡಿಕೊಂಡಿದ್ದ.

ಮೇ 18ರಂದು ಕೋಯಿಕ್ಕೋಡ್‌ನ ತಮ್ಮ ರೆಸ್ಟೋರೆಂಟ್‌ನಿಂದ ಹೊರಟು ನಗರದಲ್ಲಿ ಎರಡು ರೂಂಗಳನ್ನು ಬುಕ್ ಮಾಡಿಕೊಂಡಿದ್ದರು ಸಿದ್ಧಿಕಿ. ಸಿದ್ಧಿಕಿ ರೂಂಗೆ ಚೆಕ್‌ಇನ್ ಆದ ಕೂಡಲೇ ಫರ್ಹಾನಾ ಹಾಗೂ ಆಕೆಯ ಇಬ್ಬರು ಸಹಚರರು ಆ ಕೋಣೆಗೆ ಬಂದಿದ್ದಾರೆ. ಆ ವೇಳೆ ತಿಕ್ಕಾಟ ನಡೆದಿದ್ದು ಸಿದ್ಧಿಕಿ ಕೊಲೆಯಾಗಿದ್ದಾರೆ. ಬಚ್ಚಲು ಮನೆಯಲ್ಲಿ ಸಿದ್ಧಿಕಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಆರೋಪಿಗಳು, ಅವುಗಳನ್ನು ಬ್ಯಾಗ್‌ಗಳಿಗೆ ತುಂಬಿಕೊಂಡು ಕಾರಿನ್ನೇರಿ ಅಟ್ಟಪ್ಪಾಡಿ ಘಾಟ್ ರಸ್ತೆಯ ಬಳಿಯ ಕಣಿವೆಗೆ ಎಸೆದಿದ್ದಾರೆ.

ಸಿದ್ಧಿಕಿ ಕೊಲೆಯಾಗುತ್ತಲೇ ಅವರ ಎಟಿಎಂ ಕಾರ್ಡ್ ಬಳಸಿ ಅವರ ಖಾತೆಯಿಂದ ದುಡ್ಡು ಹಿಂಪಡೆದಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ವೇಳೆ ಸಿದ್ಧಿಕಿರ ಎಟಿಎಂ ಪಿನ್‌ ತಿಳಿದುಕೊಂಡಿದ್ದ ಶಿಬಿಲಿ. ಸಿದ್ಧಿಕಿ ಖಾತೆಯಿಂದ ಹಣ ಹಿಂಪಡೆಯಲಾದ ಸಂದೇಶವನ್ನು ಅವರ ಪುತ್ರ‍ ಮೊಬೈಲ್‌ನಲ್ಲಿ ಸ್ವೀಕರಿಸಿದ್ದಾರೆ.

ಭಾನುವಾರದಂದು ಸಿದ್ಧಿಕಿ ಕಾಣೆಯಾಗಿದ್ದಾರೆ ಎಂದು ತಿರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಹಿಂಪಡೆಯಲಾಗಿದ್ದ ಎಟಿಎಂ ಅನ್ನು ಪತ್ತೆ ಮಾಡಿದ ಪೊಲೀಸರು, ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದಾರೆ. ಈ ವಿಡಿಯೋದಲ್ಲಿ ಶಿಬಿಲಿ ಇದ್ದಾನೆ ಎಂದು ಸಿದ್ಧಿಕಿಯ ರೆಸ್ಟೋರೆಂಟ್‌ನ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಶಿಬಿಲಿ ಹಾಗೂ ಫರ್ಹಾನಾ ಎಗ್ಮೋರ್‌ ರೈಲ್ವೇ ನಿಲ್ದಾಣದಲ್ಲಿ ಬಂಧಿತರಾಗಿದ್ದು, ಅವರು ಅಸ್ಸಾಂಗೆ ತೆರಳುವವರಿದ್ದರು. ಸಿದ್ಧಿಕಿ ಕೊಲೆಯಾದಾಗಿನಿಂದ ಅವರ ಖಾತೆಯಿಂದ ಎರಡು ಲಕ್ಷ ರೂ.ಗಳನ್ನು ಆರೋಪಿಗಳು ಹಿಂಪಡೆದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read