ಮಂಡ್ಯ: ನ್ಯಾಯಾಲಯದ ಆದೇಶ ಜಾರಿ ಅಧಿಕಾರಿ ಕೋರ್ಟ್ ಅಮೀನ್ ಕಣ್ಣಿಗೆ ಕಾರದಪುಡಿ ಎರಚಿ ಪರಾರಿಯಾಗಿದ್ದ ಮಹಿಳೆಯನ್ನು ಕೆಆರ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಲಯ ಮಹಿಳೆಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆಕೆಯನ್ನು ಮಂಡ್ಯ ಜೈಲಿಗೆ ಕಳುಹಿಸಲಾಗಿದೆ. ಅಪಘಾತ ಪ್ರಕರಣವೊಂದರ ಸಂಬಂಧ ಅರೆಸ್ಟ್ ವಾರಂಟ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಂದು ಚಿಕ್ಕಈರೇಗೌಡ ಎಂಬುವವರನ್ನು ಬಂಧಿಸುವ ಬಗ್ಗೆ ತಿಳಿಸಲು ಅಮೀನ್ ಶಂಕರೇಗೌಡ ಅವರು ಆತನ ಮನೆಗೆ ಹೋಗಿದ್ದಾರೆ.
ಈ ವೇಳೆ ಈರೇಗೌಡನ ಪತ್ನಿ ಸಾಕಮ್ಮ ತನ್ನ ಪತಿಯನ್ನು ಬಂಧಿಸಬೇಡಿ ಎಂದು ಕಿರುಚಾಡಿ ಕೋರ್ಟ್ ಅಮೀನ್ ಶಂಕರೇಗೌಡ ಅವರ ಕಣ್ಣಿಗೆ ಕಾರದಪುಡಿ ಎರಚಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶಂಕರೇಗೌಡ ದೂರು ದಾಖಲಿಸಿದ್ದು, ಸಾಕಮ್ಮ ಅವರನ್ನು ಕೆಆರ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
