ಬೆಂಗಳೂರು: ಶಿಕ್ಷಣ ಸಂಸ್ಥೆಗಳು, ಸಣ್ಣ ಸಂಸ್ಥೆಗಳು, ಸಣ್ಣ ಕೈಗಾರಿಕೆ ಸ್ಥಾಪನೆಗೆ ಸೆಕ್ಷನ್ 109ರ ಅಡಿ ಕೃಷಿ ಜಮೀನು ಖರೀದಿಸಲು ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿ ಮಸೂದೆ ಮಂಡಿಸಿದ ಸಚಿವರು ಈ ಬಗ್ಗೆ ಮಾಹಿತಿ ನೀಡಿ, ಇನ್ನು ಮುಂದೆ ಜಿಲ್ಲಾಧಿಕಾರಿಗಳೇ ನಾಲ್ಕು ಹೆಕ್ಟೇರ್ ವರೆಗಿನ ಜಮೀನು ಖರೀದಿಗೆ ಅನುಮತಿ ನೀಡಬಹುದು. ಪ್ರಸ್ತಾವವನ್ನು ಮುಖ್ಯ ಕಾರ್ಯದರ್ಶಿ ವರೆಗೆ ತರುವ ಅಗತ್ಯ ಇರುವುದಿಲ್ಲ. ಈ ರೀತಿ ನೀಡುವ ಅನುಮತಿ ಸ್ವಯಂ ಚಾಲಿತವಾಗಿ ಭೂ ಪರಿವರ್ತನೆ ಆಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಸಣ್ಣ ಉದ್ಯಮಿದಾರರು, ಶಿಕ್ಷಣ ಸಂಸ್ಥೆಗಳು ಜಮೀನನ್ನು ಯಾವುದೋ ಉದ್ದೇಶಕ್ಕೆ ಪಡೆದು ಬೇರೆ ಯಾವುದೋ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ಕೇಳುತ್ತಿದ್ದರು. ಅದಕ್ಕೆ ಅವಕಾಶ ಇರಲಿಲ್ಲ. ಈಗ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಎರಡು ಎಕರೆವರೆಗಿನ ಕೃಷಿ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಪರಿವರ್ತನೆ ಮಾಡಲು ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.