ಹಾಸನ: ಹಾಸನ ಜಿಲ್ಲೆ ಸಕಲೇಶಪುರ ಪುರಸಭೆ ಮುಖ್ಯಾಧಿಕಾರಿಯವರ ಕೊಠಡಿಯಲ್ಲಿ ಟೇಬಲ್ ಮೇಲೆ ಇರಿಸಿದ್ದ ಕಡತಗಳಿಗೆ ಶುಕ್ರವಾರ ದುಷ್ಕರ್ಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಶುಕ್ರವಾರ ಮಧ್ಯಾಹ್ನದಿಂದ ಕಚೇರಿಯ ಕಾರಿಡಾರ್ ನಲ್ಲಿ ಓಡಾಡುತ್ತಿದ್ದ ಆರೋಪಿ ಬೆಂಕಿ ಹಚ್ಚಿದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಯನ್ನು ಪುರಸಭೆ ಸದಸ್ಯ ಮತ್ತು ಸಿಬ್ಬಂದಿ ನೋಡಿದ್ದಾರೆ. ಕಚೇರಿ ಒಳಗೆ ಬಂದು ಆತ ಚೀರಾಡಿದ್ದ. ಸಿಬ್ಬಂದಿ ಇರುವಾಗಲೇ ಕಡತಗಳಿಗೆ ಬೆಂಕಿ ಹಚ್ಚಿ ಸ್ಕೂಟರ್ ಹತ್ತಿ ಹೋಗುವವರೆಗೆ ಆತನನ್ನು ಸಿಬ್ಬಂದಿ ಹಿಡಿದಿಲ್ಲ. ಆತನ ಕೈಯಲ್ಲಿ ಚಾಕು ಕೂಡ ಇತ್ತು ಎನ್ನಲಾಗಿದೆ.
ಇ- ಖಾತೆ ಸೇರಿದಂತೆ ಇತರೆ ಕಚೇರಿ ಕೆಲಸಗಳಿಗೆ ಜನರು ಅಲೆದಾಡುತ್ತಿದ್ದು, ಇದರಿಂದ ಬೇಸತ್ತು ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
