ತಾಯಿಯಿಂದಲೇ ಭಯಾನಕ ಕೃತ್ಯ: ಸ್ವಂತ ಮಗಳನ್ನೇ ಬಲಿ ಕೊಟ್ಟು ʼಅಂಗಾಂಗʼ ಸೇವನೆ

ಮೂಢನಂಬಿಕೆ ಎಂಬುದು ಇನ್ನೂ ನಮ್ಮ ಸಮಾಜದ ಒಂದು ಭಾಗವಾಗಿದೆ. ದೇವರ ಮೇಲಿನ ನಂಬಿಕೆಯ ಬದಲು ಕೆಲವರು ಮಾಟ – ವಾಮಾಚಾರದಂತಹ ಅಪಾಯಕಾರಿ ತಂತ್ರಗಳಿಗೆ ಮೊರೆ ಹೋಗಿ ಭೀಕರ ಕೃತ್ಯ ಎಸಗುತ್ತಾರೆ.

ಅಂತಹ ನರಬಲಿಯ ಭೀಕರ ಪ್ರಕರಣವೊಂದು ಜಾರ್ಖಂಡ್‌ನ ಪಲಾಮುದಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳನ್ನು ‘ಬಲಿ’ ಕೊಟ್ಟು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಆಕೆಯ ಯಕೃತ್ತನ್ನು ತಿಂದಿದ್ದಾಳೆ. ಈ ಘಟನೆಯು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಜಾರ್ಖಂಡ್‌ನ ಪಲಾಮು ಜಿಲ್ಲೆಯ ನಿವಾಸಿ ಗೀತಾದೇವಿ ಎಂಬಾಕೆ ಇಂತಹ ಭಯಾನಕ ಕೃತ್ಯವೆಸಗಿದ್ದು, ‘ನರಬಲಿ’ಯ ಭಾಗವಾಗಿ ತನ್ನ ಸ್ವಂತ ಮಗಳನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಮಗುವಿನ ಯಕೃತ್ತನ್ನು ತಿಂದಿದ್ದಕ್ಕಾಗಿ ಬಂಧಿಸಲಾಗಿದೆ. ಪೊಲೀಸರ ವಶದಲ್ಲಿರುವ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಹುಸೇನಾಬಾದ್ ಠಾಣಾ ವ್ಯಾಪ್ತಿಯ ಖಾರದ್ ಗ್ರಾಮದಲ್ಲಿ ಈ ಅಮಾನುಷ ಘಟನೆ ನಡೆದಿದೆ.

ವರದಿಗಳ ಪ್ರಕಾರ ಆರೋಪಿ, ಪೊಲೀಸರ ವಿಚಾರಣೆಯಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತಾನು ಮೊದಲು ಹತ್ತಿರದ ಮಾರುಕಟ್ಟೆಗೆ ಹೋಗಿ ಅಲ್ಲಿಂದ ಬಳೆ, ಬಟ್ಟೆ ಮತ್ತು ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಿದೆ ಎಂದು ಮಹಿಳೆ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾಳೆ. ಅದೇ ದಿನ ಸಂಜೆ, ಆಕೆ ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಮನೆಯಿಂದ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಸಿಕ್ನಿ ಬರ್ವಧೋರಾ ಕಾಡಿಗೆ ತೆರಳಿದ್ದಾಳೆ.

ಅಲ್ಲಿ ಮಹಿಳೆ ತನ್ನ ಮತ್ತು ಮಗಳ ಬಟ್ಟೆಗಳನ್ನು ತೆಗೆದು ‘ಪೂಜೆ’ ಮಾಡಿ ನಂತರ ಬೆತ್ತಲೆ ಸ್ಥಿತಿಯಲ್ಲಿ ಸ್ವಲ್ಪ ಕಾಲ ನೃತ್ಯ ಮಾಡಿದ್ದಾಳೆ. ಇದರ ನಂತರ, ಮಹಿಳೆ ತನ್ನ ಅಂಬೆಗಾಲಿಡುವ ಮಗಳನ್ನು ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಲ್ಲದೇ ಅದೇ ಚಾಕುವಿನಿಂದ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಕುಳಿತು ಮಗಳ ಯಕೃತ್ತನ್ನು ತಿಂದಿದ್ದಾಳೆ.

ಬಳಿಕ ಆರೋಪಿ ಮಗಳನ್ನು ನೆಲದಲ್ಲಿ ಹೂತು ಬೆತ್ತಲೆಯಾಗಿ ಮನೆಗೆ ಹೋಗಿದ್ದು, ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿದ ಸುತ್ತಮುತ್ತಲಿನವರು ಆರೋಪಿ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಪತಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಅತ್ತೆ ತನ್ನ ಮೊಮ್ಮಗಳ ಕುರಿತು ವಿಚಾರಿಸಿದಾಗ ಅವಳನ್ನು ಕೊಂದಿರುವುದಾಗಿ ಹೇಳಿದ್ದಾಳೆ. .

ಪೊಲೀಸರ ವಿಚಾರಣೆ ವೇಳೆ ತಾನು ಮಾಟ-ಮಂತ್ರ ಮಾಡುವುದನ್ನು ಕಲಿತಿರುವುದಾಗಿ ಆರೋಪಿ ಮಹಿಳೆ ಹೇಳಿಕೊಂಡಿದ್ದಾಳೆ. ಇದರಲ್ಲಿ ಸಂಪೂರ್ಣತೆ ಸಾಧಿಸಲು ಮಗಳು ಅಥವಾ ಗಂಡನನ್ನು ತ್ಯಾಗ ಮಾಡಬೇಕಾಗಿತ್ತು. ಹೀಗಾಗಿ ಮಗಳನ್ನು ಕೊಂದೆ ಎಂದಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read