ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಿದರೆ ವಿದೇಶ ಪ್ರವಾಸ ಭಾಗ್ಯ ಸಿಗಲಿದೆ.
ದಾಖಲಾತಿ ಗುರಿ ಪೂರೈಸುವ ಡಿಡಿಪಿಐ, ಬಿಇಒ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆ ವಿದೇಶಿ ಪ್ರವಾಸದ ಆಫರ್ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷ 2026 -27ನೇ ಸಾಲಿಗೆ ದಾಖಲಾತಿ ಜಾಗೃತಿ ಅಭಿಯಾನ ನಡೆಸುವ ಸರ್ಕಾರಿ ಶಾಲೆಗಳು, ಪಿಯು ಕಾಲೇಜುಗಳಲ್ಲಿ ಅರ್ಹ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ನವೆಂಬರ್ 14ರಂದು ನಡೆದ ಮಕ್ಕಳ ದಿನಾಚರಣೆಯಲ್ಲಿ 6ರಿಂದ 18 ವರ್ಷದ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ ನಡೆಸಲಾಗಿದೆ. ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ಮಾಡುವ ತಲಾ ಐವರು ಡಿಡಿಪಿಐ, ಬಿಇಒ, ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯ ಶಿಕ್ಷಕರು, ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿನ ಅತ್ಯುತ್ತಮ ಆಚರಣೆಗಳ ಬಗ್ಗೆ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗುವುದು.
ಕಳೆದ ಸಾಲಿನ ದಾಖಲಾತಿಗಿಂತ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶೇಕಡ 15ರಷ್ಟು ಹೆಚ್ಚಳವಾಗಬೇಕು. ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪಿಎಂ ಶ್ರೀ ಶಾಲೆಗಳಲ್ಲಿ ಕನಿಷ್ಠ ಶೇಕಡ 25ರಷ್ಟು ದಾಖಲಾತಿ ಹೆಚ್ಚಿಸಬೇಕು ಎಂದು ಗುರಿ ನೀಡಲಾಗಿದೆ.
