ರೈತರಿಗೆ ಸೇರಬೇಕಾದ ಬೆಳೆ ಪರಿಹಾರ ದುರ್ಬಳಕೆ: ಇಬ್ಬರು ಅಧಿಕಾರಿಗಳ ಅಮಾನತು

ಚಿತ್ರದುರ್ಗ: ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ.

ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನೀಸಾ ಹಾಗೂ ತಳಕು ಹೋಬಳಿ ಕಾಲುವೇಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಸಿರಾಜ್ ಉಲ್ ಹುಸೇನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.

ನಿಯಮಾನುಸಾರ ಬೆಳೆ ಪರಿಹಾರದ ಹಣವನ್ನು ಆರ್.ಟಿ.ಸಿ ದಾಖಲೆಯನ್ವಯ ನೈಜ ಫಲಾನುಭವಿಗಳ ಖಾತೆಗೆ ಜಮಾ  ಮಾಡಬೇಕಿರುತ್ತದೆ. ಒಂದು ವೇಳೆ ಆರ್.ಟಿ.ಸಿ ದಾಖಲೆಗೂ ಜಮಾ ಮಾಡಲು ನಮೂದಿಸಿರುವ ಖಾತೆ ಸಂಖ್ಯೆಯ ವಾರಸುದಾರರಿಗೂ ವ್ಯತ್ಯಾಸವಿದ್ದಲ್ಲಿ ಅದನ್ನು ಖಚಿತಪಡಿಸಿಕೊಂಡ ಬಳಿಕವೇ ಹಣ ಪಾವತಿಗೆ ನಮೂದಿಸಬೇಕಿರುತ್ತದೆ.  ಆದರೆ ಆರೋಪಿಗಳು ಯಾವುದನ್ನೂ ಪರಿಶೀಲಿಸದೇ, ಉದ್ದೇಶಪೂರ್ವಕವಾಗಿ ಪರಿಹಾರದ ಮೊತ್ತವನ್ನು ಅರ್ಹ ಫಲಾನುಭವಿಗಳ ಹೆಸರಿಗೆ ನಮೂದಿಸದೇ ಬೇರೆ ವ್ಯಕ್ತಿಗಳ ಹೆಸರಿಗೆ ಪರಿಹಾರದ ಹಣವನ್ನು ನಮೂದು ಮಾಡಿ, ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.

ಕರ್ತವ್ಯ ಲೋಪವೆಸಗಿರುವ ನೌಕರರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ಶಿಸ್ತು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದರು.  ಆರೋಪಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿತ್ತು.  ಆದರೆ ನೌಕರರು ಸಲ್ಲಿಸಲಾಗಿರುವ ಲಿಖಿತ ಸಮಜಾಯಷಿಯಲ್ಲಿ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ.

ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳೆ ಪರಿಹಾರ ಮೊತ್ತ ಪಾವತಿ ಕುರಿತು ಫಲಾನುಭವಿಗಳ ವಿವರ ಪರಿಶೀಲಿಸಿ, ಕ್ರಮ ವಹಿಸಬೇಕಿದ್ದ ಚಳ್ಳಕೆರೆಯ ಆಗಿನ ತಹಶೀಲ್ದಾರ್ ಆಗಿದ್ದ ರಘುಮೂರ್ತಿ, ಕಂಪ್ಯೂಟರ್ ಆಪರೇಟರ್‍ಗಳು, ಗ್ರಾಮ ಆಡಳಿತ ಅಧಿಕಾರಿಗಳು  ಸೇರಿದಂತೆ ಒಟ್ಟು 6 ಜನರ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ಒಟ್ಟು 20.49 ಲಕ್ಷ ರೂ. ಹಣ ದುರ್ಬಳಕೆಯ ಹಾಗೂ ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಎಫ್‍ಐಆರ್ ದಾಖಲಾಗಿರುತ್ತದೆ.

ಇಬ್ಬರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ನೌಕರರು ಅಮಾನತುಗೊಂಡ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಹಾಗೂ ಕರ್ನಾಟಕ ಸಿವಿಲ್ ಸೇವಾ ನಿಯಮಗಳನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read