ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಎಸಿ ಕಚೇರಿ ಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಕರನ್ನು ನಗರ ಭಾಗಕ್ಕೆ ಸಮೀಕ್ಷೆಗೆ ನೇಮಿಸಲಾಗಿದೆ. ಸುಮಾರು 40 ಕಿಲೋ ಮೀಟರ್ ದೂರವಿರುವ ಶಾಲೆಗಳಿಂದ ಬಂದು ಸಮೀಕ್ಷೆ ನಡೆಸುವುದು ಅಸಾಧ್ಯವಾಗಿದೆ. ಹಿಂದುಳಿದ ವರ್ಗಗಳ ಇಲಾಖೆ ಕೇವಲ ಒಮ್ಮೆ ಮಾತ್ರ ತರಬೇತಿ ನೀಡಿದೆ. ಮತ್ತೊಂದು ತರಬೇತಿ ನೀಡದೆ ಸಮೀಕ್ಷೆ ಮಾಡಿಸಲು ಮುಂದಾಗಿದೆ. ಅದರಲ್ಲೂ ಕೆಲವು ಗರ್ಭಿಣಿ ಶಿಕ್ಷಕಿಯರನ್ನು ಸಮೀಕ್ಷೆಗೆ ನೇಮಕ ಮಾಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರನ್ನು ಕೂಡ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ.
ತಾಲೂಕಿನಲ್ಲಿ ಸಮೀಕ್ಷೆ ಮಾಡುವ ಶಿಕ್ಷಕರ ಪಟ್ಟಿಯನ್ನು ಇನ್ನೂ ನೀಡಿಲ್ಲ. ಶಿಕ್ಷಕರ ಗೊಂದಲಗಳನ್ನು ನಿವಾರಿಸಬೇಕೆಂದು ಒತ್ತಾಯಿಸಿ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ನಮ್ಮೆಲ್ಲ ಗೊಂದಲ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸಮೀಕ್ಷೆ ನಡೆಸಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ. ಬೇಡಿಕೆ ಗೊಂದಲಗಳನ್ನು ಬಗೆಹರಿಸುವಂತೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅವರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.