ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗಾಗಿ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಮಂಡಿ ಚಿಪ್ಪು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಪ್ಯಾಕೇಜ್ ದರ ಪರಿಷ್ಕರಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಶಸ್ತ್ರಚಿಕಿತ್ಸೆಗೆ ಪ್ರೋತ್ಸಾಹ ನೀಡಲು ವೆಚ್ಚ ವೆಚ್ಚದ ಶೇಕಡ 100ರಷ್ಟು ಹಣವನ್ನು ಸುವರ್ಣ ಆರೋಗ್ಯ ಟ್ರಸ್ಟ್ ನಿಂದ ಆಸ್ಪತ್ರೆಗೆ ಮರುಪಾವತಿ ಮಾಡಲು ನಿರ್ದೇಶನ ನೀಡಲಾಗಿದೆ.
ಮಂಡಿ ಚಿಪ್ಪು ಬದಲಾವಣೆಗೆ 65,000 ರೂ., ಸೊಂಟದ ಮೂಳೆ ಬದಲಿಗೆ ಶಸ್ತ್ರಚಿಕಿತ್ಸೆಗೆ ಒಂದು ಲಕ್ಷ ರೂ. ಪರಿಸ್ಕೃತ ದರ ನಿಗದಿ ಪಡಿಸಲಾಗಿದೆ/ ಈ ಮೊದಲು ಈ ಪ್ರಮಾಣ ಶೇಕಡ 75 ರಷ್ಟು ಇತ್ತು.
ವೈದ್ಯಕೀಯ ಶಿಕ್ಷಣ ಇಲಾಖೆ ಸ್ಥಾಪಿಸಿದ ದರ ಒಪ್ಪಂದದ ಆಧಾರದ ಮೇಲೆ ಇಂಪ್ಲಾಂಟ್ ವೆಚ್ಚ ಕೂಡ ಪ್ಯಾಕೇಜ್ ವೆಚ್ಚದ ಅಡಿಯಲ್ಲಿಯೇ ಬರುತ್ತದೆ. ಇದಲ್ಲದೆ ಶಸ್ತ್ರಚಿಕಿತ್ಸೆ ವೈದ್ಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದರೆ ಇತರೆ ಸರ್ಕಾರಿ ಅಥವಾ ಸ್ವಾಯತ್ತ ಸಂಸ್ಥೆಯಿಂದ ವೈದ್ಯರ ನೆರವು ಪಡೆದುಕೊಳ್ಳಬಹುದು. ಅವರಲ್ಲಿ ಖಾಸಗಿ ವೈದ್ಯರು ಶೇಕಡ 100 ಹಾಗೂ ಸ್ವಾಯತ್ತ ಆಸ್ಪತ್ರೆಗಳ ವೈದ್ಯರು ಶೇಕಡ 75 ರಷ್ಟು ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.
ಖಾಸಗಿ ಅನುಭವಿ ಶಸ್ತ್ರಚಿಕಿತ್ಸಕರಿಗೆ ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ 9750 ರೂ., ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗೆ 15,000 ರೂ. ನಿಗದಿಪಡಿಸಲಾಗಿದೆ. ಸರ್ಕಾರಿ ಸ್ವಾಯತ್ತ ಸಂಸ್ಥೆಯ ವೈದ್ಯರಿಗೆ 7313 ರೂ., 11,250 ರೂಪಾಯಿ ನಿಗದಿಪಡಿಸಲಾಗಿದೆ.