ಕಲಬುರಗಿ: ಮೂರು ತಿಂಗಳಿನಿಂದ ವೇತನ ಪಾವತಿ ಆಗದ ಹಿನ್ನೆಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡಡ ಗ್ರಾಮದ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ನಿಮಠ(40) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಮೂರು ತಿಂಗಳಿನಿಂದ ಸಂಬಳ ನೀಡದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು, ನೇಣಿಗೆ ಶರಣಾಗಿದ್ದಾರೆ. ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ.
ಡೆತ್ ನೋಟ್ ನಲ್ಲಿ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳ ಹೆಸರು ಪ್ರಸ್ತಾಪಿಸಿರುವ ಅವರು ಸಂಬಳ ನೀಡಿದ್ದಕ್ಕೆ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ. ಮೂರು ತಿಂಗಳಿನಿಂದ ಅವರಿಗೆ ವೇತನ ಪಾವತಿ ಆಗಿರಲಿಲ್ಲ. ವೇತನ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದರು. ಇದೇ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.